ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕಾಮಗಾರಿಯಲ್ಲಿ ಹಣ ಲೂಟಿ

ಅಕ್ರಮದಲ್ಲಿ ಪಿಡಿಒಗಳು ಶಾಮೀಲು: ತಾ.ಪಂ ಸದಸ್ಯರ ಆರೋಪ
Last Updated 9 ಸೆಪ್ಟೆಂಬರ್ 2020, 15:44 IST
ಅಕ್ಷರ ಗಾತ್ರ

ಕೋಲಾರ: ‘ನರೇಗಾ ಕಾಮಗಾರಿಗಳನ್ನು ಬೆರಳೆಣಿಕೆ ಗುತ್ತಿಗೆದಾರರಿಗೆ ನೀಡುವ ಮೂಲಕ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಈ ಅಕ್ರಮದಲ್ಲಿ ಪಿಡಿಒಗಳು ಶಾಮೀಲಾಗಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲ್‌ಗೌಡ ಆರೋಪಿದರು.

ಇಲ್ಲಿ ಬುಧವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ 36 ಗ್ರಾ.ಪಂಗಳಿವೆ. ಪ್ರತಿ ಗ್ರಾ.ಪಂಗೆ ಕನಿಷ್ಠ ₹ 25 ಲಕ್ಷದಂತೆ ತಾಲ್ಲೂಕಿನ ಎಲ್ಲಾ ಗ್ರಾ.ಪಂಗಳಿಂದ ₹ 9 ಕೋಟಿ ಮೊತ್ತದ ಕಾಮಗಾರಿಗಳನ್ನು ಅಧಿಕಾರಿಗಳು ತಮಗೆ ಬೇಕಾದ ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ’ ಎಂದು ಹೇಳಿದರು.

‘ಕಾಮಗಾರಿ ಬಿಲ್‌ ಮಂಜೂರು ಮಾಡಿದ್ದು, ನರೇಗಾ ಭಾರಿ ಅಕ್ರಮ ನಡೆದಿದೆ. ಜಿಲ್ಲೆಯಲ್ಲಿ ಸುಮಾರು ₹ 60 ಕೋಟಿ ಅವ್ಯವಹಾರವಾಗಿರುವ ಶಂಕೆ ಇದೆ. ಈ ಸಂಬಂಧ ಉನ್ನತ ತನಿಖೆ ನಡೆಸಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ತಾಲ್ಲೂಕಿನ ಹೋಳೂರು ಗ್ರಾಮದಿಂದ ಘಟ್ಟಹಳ್ಳಿವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾಕಷ್ಟು ಅಪಘಾತ ಸಂಭವಿಸುತ್ತಿವೆ. ಅಧಿಕಾರಿಗಳು ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ‘ಒಂದು ವಾರದೊಳಗೆ ರಸ್ತೆ ದುರಸ್ತಿ ಆಗಬೇಕು. ಇಲ್ಲದಿದ್ದರೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗೆ ದಿಗ್ಬಂಧನ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಿದ್ದೀರಿ. ತಾಲ್ಲೂಕಿನಲ್ಲಿ ಶೇ 50ರಷ್ಟು ಚೆಕ್‌ಡ್ಯಾಮ್‌ಗಳು ಒಂದೇ ಕಾಮಗಾರಿಯಲ್ಲಿ ನಡೆದಿವೆ. ಆದರೆ, ಕೆ.ಸಿ ವ್ಯಾಲಿ, ಎತ್ತಿನ ಹೊಳೆ ಯೋಜನೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಯೋಜನೆಗಳಲ್ಲಿ ಚೆಕ್‌ಡ್ಯಾಮ್‌ ಕಾಮಗಾರಿ ನಡೆದಿವೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವರ್ತನೆ ಬದಲಾಗಲಿ: ‘ಪಿಡಿಒಗಳು ಜನಪ್ರತಿನಿಧಿಗಳ ಜತೆ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರು ಬಂದಿವೆ. ಪಿಡಿಒಗಳು ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ಎಚ್ಚರಿಕೆ ನೀಡಿದರು.

‘ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಏಪ್ರಿಲ್ ತಿಂಗಳಿನಿಂದ ಈವರೆಗಿನ ಸುಮಾರು ₹ 2.50 ಕೋಟಿ ಸಹಾಯಧನ ವಾರದೊಳಗೆ ಬಿಡುಗಡೆ ಮಾಡಲಾಗುತ್ತದೆ. ಕೊರೊನಾ ಸೋಂಕಿನ ಆತಂಕದ ಕಾರಣಕ್ಕೆ ಸರ್ಕಾರ ವಿದ್ಯಾಗಮ ಕಾರ್ಯಕ್ರಮ ರೂಪಿಸಿದ್ದು, ಶಿಕ್ಷಕರು ಪ್ರತಿ ಹಳ್ಳಿಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ನರೇಗಾ ಅನುದಾನದಲ್ಲಿ ಗ್ರಾಮೀಣ ಶಾಲೆಗಳಿಗೆ ಕಾಂಪೌಡ್‌ ನಿರ್ಮಿಸಬಹುದು. ಮೇಕೆ ಮತ್ತು ಕುರಿ ಶೇಡ್‌ ನಿರ್ಮಾಣಕ್ಕೆ ಸರ್ಕಾರದಿಂದ ₹ 65 ಸಾವಿರ ಸಹಾಯಧನ ನೀಡಲಾಗುತ್ತಿದೆ. ರೈತರೇ ಆ್ಯಪ್ ಮೂಲಕ ತಮ್ಮ ಬೆಳೆಯ ಸಮೀಕ್ಷೆ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಈಗಾಗಲೇ ಶೇ 50ರಷ್ಟು ಬೆಳೆ ಸಮೀಕ್ಷೆ ಕಾರ್ಯ ಮುಗಿದಿದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಬೆಳೆ ಪರಿಹಾರಧನ ಜಮೆಯಾಗಲಿದೆ’ ಎಂದರು.

ಸಾವು ಹೆಚ್ಚಳ: ‘ತಾಲ್ಲೂಕಿನ ಕೃಷಿ ಹೊಂಡಗಳಲ್ಲಿ ಮುಳುಗಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜತೆ ಸಭೆ ನಡೆಸಿ ಕೃಷಿ ಹೊಂಡಗಳ ಸುತ್ತ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸುವಂತೆ ಸೂಚಿಸಬೇಕು. ಜತೆಗೆ ಕೃಷಿ ಹೊಂಡಗಳ ಬಳಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು’ ಎಂದು ತಾ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ ಸಲಹೆ ನೀಡಿದರು.

ತಾ.ಪಂ ಉಪಾಧ್ಯಕ್ಷೆ ಸಿ.ಲಕ್ಷ್ಮೀ, ಸದಸ್ಯರು ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT