ಭಾನುವಾರ, ನವೆಂಬರ್ 28, 2021
19 °C

ಅವಿಭಕ್ತ ಕುಟುಂಬ ಕಣ್ಮರೆ: ಜಿಲ್ಲಾಧಿಕಾರಿ ಸೆಲ್ವಮಣಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಾಗತಿಕ ಪರಿಸ್ಥಿತಿ ಮತ್ತು ಬಿಡುವಿಲ್ಲದ ಜೀವನ ಶೈಲಿಯಲ್ಲಿ ವಯೋವೃದ್ಧ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ಎದುರಾಗಿದೆ. ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿವೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಅಬಕಾರಿ ಇಲಾಖೆ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿ ಶನಿವಾರ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

‘ಕೌಟುಂಬಿಕ ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ ನಡೆಯದಂತೆ ತಡೆಯುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಮನೋಭಾವ ಕಡಿಮೆಯಾಗುತ್ತಿದೆ. ಜನರಲ್ಲಿ ಪರಸ್ಪರ ನಂಬಿಕೆ ಇಲ್ಲವಾಗಿದೆ’ ಎಂದು ವಿಷಾದಿಸಿದರು.

‘ಈ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದರೆ, ಈಗ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಹಿರಿಯ ನಾಗರಿಕರು ಬದುಕಿದ ರೀತಿ ಮತ್ತು ಅವರ ಅನುಭವ ಸಮಾಜಕ್ಕೆ ಅಮೂಲ್ಯ ಆಸ್ತಿ. ಅವರ ಬದುಕಿನ ಪರಿಚಯ ಮನೆಯ ಮೊಮ್ಮಕ್ಕಳಿಗೂ ಸಿಕ್ಕಿದ್ದಾಗ ಮಾತ್ರ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ. ಜನರಲ್ಲಿನ ಅಪನಂಬಿಕೆ ದೂರ ಮಾಡಬೇಕು. ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿ ಕಾನೂನಿನ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಮನುಷ್ಯನಿಗೆ ಕಾನೂನಿನ ಅರಿವು ಇದ್ದರೆ ಭ್ರಷ್ಟಾಚಾರ ರಹಿತ ಮತ್ತು ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ರಾಜಕೀಯ ಪ್ರೇರಿತ ಗಲಭೆ, ಭಿನ್ನಾಭಿಪ್ರಾಯ, ತಪ್ಪು ಗ್ರಹಿಕೆಯಿಂದಾಗುವ ದ್ವೇಷ, ಘರ್ಷಣೆ ತಪ್ಪಿಸಲು ಕಾನೂನು ಅರಿವು ಒಂದೇ ದಾರಿ’ ಎಂದು ಅಭಿಪ್ರಾಯಪಟ್ಟರು.

ಕ್ರಿಯಾಶೀಲವಾಗಿ: ‘ತುಂಬಾ ಕೆಲಸಗಳಲ್ಲಿ ಯಾವ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದು ಸುಲಭದ ಮಾತಲ್ಲ. ಸಾಕಷ್ಟು ಯೋಚಿಸಿ ಪ್ರಕರಣ ಪರಿಶೀಲಿಸಿದರೂ ಅದು ತಪ್ಪಾಗುವ ಸಾಧ್ಯತೆಯಿದೆ. ಅದನ್ನು ಸರಿಪಡಿಸಿಕೊಳ್ಳಲು ಕಾನೂನು ಅರಿವು ಪಡೆದು ಪ್ರಕರಣಗಳನ್ನು ಪರಿಶೀಲಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಕಠಿಣ ಕಾನೂನು ಜಾರಿ ಮಾಡಿದ್ದು, ಇದರ ಅರಿವು ಪಡೆಯುವ ಮೂಲಕ ಸಾಮಾಜಿಕ ಪಿಡುಗುಗಳ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಕೋರಿದರು.

‘ನ್ಯಾಯಬದ್ಧವಾಗಿ ಕಾನೂನಿನ ಅಡಿ ಸಮಾಜಕ್ಕೆ ಒಳ್ಳೆಯದು ಮಾಡಿದರೆ ಆತ್ಮತೃಪ್ತಿ ಸಿಗುತ್ತದೆ. ಕಾನೂನು ತಿಳಿದು ಚಿಂತನೆ ಮಾಡಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಅಧಿಕಾರಿಗಳು ಕಾನೂನು ಅರಿವು ಪಡೆದುಕೊಂಡರೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬಹುದು ಮತ್ತು ಅಕ್ರಮ ತಡೆಯಬಹುದು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ್‌ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ವಿವೇಕ್ ಗ್ರಾಮೋಪಾಧ್ಯಾಯ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಅಬಕಾರಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.