ಕೋಲಾರ: ಟೊಮೆಟೊ ಧಾರಣೆ ಸಾರ್ವಕಾಲಿಕ ಏರಿಕೆ ಕಂಡ ಖುಷಿಯಲ್ಲಿ ಜಿಲ್ಲೆಯ ಬೆಳೆಗಾರರು 6 ಸಾವಿರ ಹೆಕ್ಟೇರ್‌ನಲ್ಲಿ ನಾಟಿ ಮಾಡಿದ್ದಾರೆ. ಇನ್ನೂ ಸಾವಿರ ಹೆಕ್ಟೇರ್‌ನಲ್ಲಿ ಸಸಿ ನೆಡಲು ಲಕ್ಷಾಂತರ ರೂಪಾಯಿ ಬಂಡವಾಳ ತೊಡಗಿಸಿ ಜಮೀನು ಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ನರ್ಸರಿಗಳಲ್ಲಿ ಟೊಮೆಟೊ ಸಸಿಗೆ (ನಾರು) ಭಾರಿ ಬೇಡಿಕೆ ಇದೆ.
‘ಆರು ಎಕರೆಯಲ್ಲಿ ಟೊಮೆಟೊ ನಾಟಿ ಮಾಡಲು ₹15 ಲಕ್ಷ ಬಂಡವಾಳ ಹೂಡುತ್ತಿದ್ದೇವೆ. ಉಳುಮೆ ಮಾಡಿ ಗೊಬ್ಬರ ಹಾಕಿ ಮಲ್ಚಿಂಗ್ ಪೇಪರ್ ಹಾಸಿದ್ದೇವೆ. ಈಗಲೇ ₹7ಲಕ್ಷ ಖರ್ಚಾಗಿದೆ. ಸಸಿ ನಾಟಿಗೆ ಸಿದ್ಧತೆ ನಡೆದಿದ್ದು, ಬಂಡವಾಳ ಬಂದರೆ ಸಾಕು. ನವೆಂಬರ್ ಮೊದಲ ವಾರ ಫಸಲು ಬರಲಿದ್ದು, ಆಗ ₹700ರಿಂದ ₹800 ಬೆಲೆ ಇದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ನಷ್ಟವಾಗಲಿದೆ’ ಎಂದು ಜಿಲ್ಲೆಯ ಹುತ್ತೂರು ಗ್ರಾಮದ ರೈತ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಾಟಿ ಮಾಡಿದ್ದ ಟೊಮೆಟೊ ಈಗ ಫಸಲು ಕೊಡುತ್ತಿದೆ. ಇದೇ ಕಾರಣಕ್ಕೆ ಮಾರುಕಟ್ಟೆಗೆ ಟೊಮೆಟೊ ಆವಕ ಹೆಚ್ಚಿದೆ. ಮಾರುಕಟ್ಟೆಗೆ ಶುಕ್ರವಾರ 88,393 ಕ್ವಿಂಟಲ್ ಟೊಮೆಟೊ ಆವಕವಾಗಿದೆ. 15 ದಿನಗಳ ಅಂತರದಲ್ಲಿ ಸುಮಾರು 37 ಸಾವಿರ ಕ್ವಿಂಟಲ್ ಆವಕ ಹೆಚ್ಚಿದೆ.
ಚಳ್ಳಕೆರೆ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಆಂಧ್ರಪ್ರದೇಶದ ಮಲಕಲಚೆರುವುನಿಂದಲೂ ಕೋಲಾರ ಮಂಡಿಗೆ ಟೊಮೆಟೊ ಆವಕವಾಗುತ್ತಿದೆ.
‘ಪೂರೈಕೆಯಲ್ಲಿ ಬಹಳ ಹೆಚ್ಚಳವಾಗಿರುವುದರಿಂದ ಟೊಮೆಟೊ ಧಾರಣೆ ಇಳಿಕೆ ಮುಂದುವರಿಯಲಿದೆ. ಮಳೆ ಬಂದರೆ ಮಾತ್ರ ದರ ಹೆಚ್ಚಲಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಹೇಳಿದರು.
- 6 ಎಕರೆಯಲ್ಲಿ ಟೊಮೆಟೊ ಸಸಿ ನಾಟಿ ಮಾಡಲು ಸಿದ್ಧತೆ ನಡೆಸಿದ್ದೇವೆ. ದರ ಕುಸಿಯುತ್ತಿರುವುದನ್ನು ನೋಡಿದರೆ ಈಗಲೇ ಚಿಂತೆ ಉಂಟಾಗಿದೆಸತೀಶ್ ಟೊಮೆಟೊ ಬೆಳೆಗಾರ ಹುತ್ತೂರು ಕೋಲಾರ
15 ಕೆ.ಜಿ ಟೊಮೆಟೊ ಬಾಕ್ಸ್‌ಗೆ ₹800
ಕೋಲಾರ ಎಪಿಎಂಸಿಯಲ್ಲಿ ಶುಕ್ರವಾರ ಕೂಡ ಹರಾಜಿನಲ್ಲಿ 15 ಕೆ.ಜಿ. ಟೊಮೆಟೊ ಬಾಕ್ಸ್ ಕೇವಲ ₹800ಕ್ಕೆ ಮಾರಾಟವಾಗಿದೆ. ರೈತರಿಗೆ ಕೆ.ಜಿಗೆ ಸರಾಸರಿ ₹53 ಸಿಕ್ಕಿದೆ. ಇದೇ ಪ್ರಮಾಣದ ಟೊಮೆಟೊ ಜುಲೈ 31ರಂದು ಗರಿಷ್ಠ ₹2700ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಆಗ ಕೆ.ಜಿಗೆ ಸರಾಸರಿ ₹180 ಲಭಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.