ಶುಕ್ರವಾರ, ನವೆಂಬರ್ 22, 2019
20 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ಅಡಮಾನ ಸಾಲ ಬಾಕಿ: ಆಸ್ತಿಜಪ್ತಿ ಖಚಿತ

Published:
Updated:
Prajavani

 ಕೋಲಾರ: ‘ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲ ಎಂದಿಗೂ ಆಸ್ತಿಯಾಗುವುದಿಲ್ಲ. ಕಾಲ ಮಿತಿಯೊಳಗೆ ಸಾಲ ತೀರಿಸದಿದ್ದರೆ ಯಾರ ಮುಲಾಜಿಗೂ ಒಳಗಾಗದೆ ಅಡಮಾನ ಇಟ್ಟಿರುವ ಆಸ್ತಿಯನ್ನು ಜಪ್ತಿ ಪಡಿಸಿಕೊಳ್ಳಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂಡಗೌಡ ಎಚ್ಚರಿಕೆ ನೀಡಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಅಡಮಾನ ಮನೆ ಸಾಲ ಬಾಕಿ ಉಳಿಸಿಕೊಂಡಿರುವವರ ನಿವಾಸಗಳ ಮನೆಗೆ ಅಂತಿಮ ನೋಟೀಸ್ ಅಂಟಿಸಿ ಮಾತನಾಡಿ, ‘ಸಾಲ ಪಡೆದುಕೊಳ್ಳುವಾಗ ಇರುವ ಉತ್ಸಾಹ, ಮರುಪಾವತಿ ಮಾಡುವಾಗ ಎಲ್ಲಿಗೆ ಹೋಗುತ್ತದೆ’ ಎಂದು ಪ್ರಶ್ನಿಸಿದರು.

‘ಬ್ಯಾಂಕಿನಿಂದ ಎರಡೂ ಜಿಲ್ಲೆಯ ರೈತರಿಗೆ, ಮಹಿಳಯರಿಗೆ ವಿವಿಧ ರೀತಿಯ ಸಾಲ ನೀಡಲಾಗಿದೆ. ಅವರು ಶೇ.100ರಷ್ಟು ಮರುಪಾವತಿ ಮಾಡುತ್ತಿದ್ದಾರೆ. ಅವರಲ್ಲಿ ಇರುವ ಪ್ರಮಾಣಿಕತೆ ನಿಮಗಿಲ್ಲವೇ, ಮರುಪಾವತಿಸಿ ಗೌರವ ಉಳಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಆಸ್ತಿಗಳ ಜಪ್ತಿಗೆ ಈಗಾಗಲೇ ಅಂತಿಮ ನೋಟೀಸ್ ನೀಡಲಾಗಿದ್ದು, ಶಿಫಾರಸ್ಸು, ಪ್ರಭಾವಗಳಿಗೆ ಒಳಗಾಗದೇ ಹರಾಜು ಹಾಕಲಾಗುವುದು’ ಎಂದು ತಾಕೀತು ಮಾಡಿದರು.

‘ಅವಿಭಜಿತ ಜಿಲ್ಲೆಯಲ್ಲಿ ಒಟ್ಟು 243 ಮಂದಿಗೆ ಮನೆ ನಿರ್ಮಾಣಕ್ಕಾಗಿ ಸುಮಾರು ₹ 36.75 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಸುಮಾರು 100 ಮಂದಿ ಸಾಲದ ಕಂತು ಮರುಪಾವತಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ, ಬ್ಯಾಂಕ್ ಸಿಬ್ಬಂದಿ ಪದೇ ಪದೇ ಅವರ ಮನೆಗಳಿಗೆ ಅಲೆದು ಒತ್ತಡ ಹಾಕಿದರೂ ಲೆಕ್ಕಿಸದೇ ಸಾಲ ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಈಗಾಗಲೇ ಇಂತಹವರಿಗೆ ಸ್ಥಿರ ಸ್ವತ್ತುಗಳನ್ನು ಜಪ್ತಿ ಮಾಡಲು ಸರ್‌ಪ್ರೈಸ್ ಆ್ಯಕ್ಟ್ ಅನ್ವಯ ತಗಾದೇ ನೋಟೀಸ್ ಜಾರಿ ಮಾಡಲಾಗಿದೆ. ಇದಕ್ಕು ಮಣಿಯದಿದ್ದರೆ ಆಸ್ತಿ ಕಳೆದುಕೊಳ್ಳುತೀರಾ. ಸಾಲದ ಕಂತು ಮರುಪಾವತಿಸದವರ ವಸತಿ, ವಾಣಿಜ್ಯ ಆಸ್ತಿಗಳ ಜಪ್ತಿಗೆ ಈಗಾಗಲೇ ವಕೀಲರ ಮೂಲಕ ಲೀಗಲ್ ನೋಟೀಸ್ ಜಾರಿ ಮಾಡಲಾಗಿದೆ. ಇದು ಅಂತಿಮ ಎಚ್ಚರಿಕೆಯಾಗಿದೆ’ ಎಂದು ಹೇಳಿದರು.

‘ಸ್ತ್ರೀ ಶಕ್ತಿ ಸಂಘಗಳಿಗೆ ₹ 800 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಗೌರವದಿಂದ ಸಾಲ ಮರುಪಾವತಿ ಮಾಡಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ ಉಳ್ಳವರಿಗೆ ಮನೆಕಟ್ಟಲು ನೀಡಿರುವ ಸಾಲ ಮರುಪಾವತಿ ವಿಳಂಬವಾಗಿದೆ’ ಎಂದು ವಿಷಾದಿಸಿದರು.

‘ಸಾಲ ಬಾಕಿ ಉಳಿಸಿಕೊಂಡಿರುವವರು ನಗರದಲ್ಲಿ ಆಸ್ತಿ ಹೊಂದಿರುವವರೇ ಆಗಿರುವುದರ ಜತೆಗೆ ಇವರಿಗೆ ಹೆಚ್ಚು ಸರ್ಕಾರಿ ನೌಕರರೇ ಭಧ್ರತೆ ಹಾಕಿದ್ದಾರೆ. ಅವರಿಗೂ ನೋಟೀಸ್ ನೀಡಲಾಗಿದೆ, ಈಗಲೂ ಬ್ಯಾಂಕಿಗೆ ಬಂದು ಸಾಲದ ಬಾಕಿ ಕಂತುಗಳನ್ನು ಮರುಪಾವತಿಸದಿದ್ದಲ್ಲಿ ಆಸ್ತಿಗಳ ಜಪ್ತಿ ಖಚಿತ’ ಎಂದು ತಿಳಿಸಿದರು.

ಬ್ಯಾಂಕಿನ ಎಜಿಎಂ ನಾಗೇಶ್, ಸೂಪರ್ ವೈಸರ್ ಅಮಿನಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)