ಬುಧವಾರ, ಜನವರಿ 29, 2020
29 °C

ಕೋಲಾರ: ಚಿದಾನಂದ ಮೂರ್ತಿ ನಿಧನಕ್ಕೆ ಸಂತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಾಹಿತಿ ಚಿದಾನಂದಮೂರ್ತಿ ಅವರ ನಿಧಾನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದಷ್ಟು ನಷ್ಟವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತಿ ಡಾ.ಎಂ.ಚಿದಾನಂದ ಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂತಾಪ ಸೂಚಿಸಿ ಮಾತನಾಡಿ, ‘ಚಿದಾನಂದಮೂರ್ತಿ ಅವರಿಗೂ ಕೋಲಾರಕ್ಕೆ ಅಪಾರ ನಂಟಿದೆ’ ಎಂದರು.

‘ಸಂಶೋಧನೆ ಮೂಲಕ ಕರ್ನಾಟಕದ ಇತಿಹಾಸವನ್ನು ತೋರಿಸಿಕೊಟ್ಟಿದ್ದಾರೆ. ಹಿಂದೆ ಕೆಜಿಎಫ್‌ನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ ಗಡಿ ಭಾಗದಲ್ಲಿ ಭಾಷೆ, ಸಾಹಿತ್ಯ ಕ್ಷೇತ್ರದ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದರು’ ಎಂದು ಸ್ಮರಿಸಿದರು.

‘ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಪುರಾಣ, ಸೂರ್ಯಗ್ರಹಣ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾದಿದ್ದರು’ ಎಂದು ವಿವರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ‘ಚಿದಾನಂದಮೂರ್ತಿ ಅವರು ನಾಡು, ಸಾಹಿತ್ಯ, ಭಾಷ ಸಂಶೋಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ, ಅವರ ಅಗಲಿಕೆಯಿಂದ ಅಪಾರ ನಷ್ಟವಾಗಿದೆ’ ಎಂದು ವಿಷಾದಿಸಿದರು.

ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ, ‘ಮೂಲತಃ ಇತಿಹಾಸ ಉಪನ್ಯಾಸಕರಾಗಿದ್ದ ಚಿದಾನಂಮೂರ್ತಿ ಅವರು, ದೇಶದ ಇತಿಹಾಸದ ಬಗ್ಗೆ ಅನೇಕ ದಾಖಲೆಗಳನ್ನು ಸಂಗ್ರಹಿಸಿಟ್ಟಿದ್ದಾರೆ’ ಎಂದರು.

‘ಸಂಶೋಧನೆ, ಸಾಹಿತ್ಯ ಸೇವೆ ಜತೆಗೆ ಸಮಾಜ ಸೇವೆಯಲ್ಲೂ ಅವರು ಮುಂದಿದ್ದರು, ಹಂಪಿಯಲ್ಲಿ ಕನ್ನಡ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕೆಂದು ಹೋರಾಟ ಹಾಗೂ ಗೋಕಾಕ್ ಚಳುವಳಿಯಲ್ಲೂ ಚಿದಾನಂದಮೂರ್ತಿ ಅವರು ಪ್ರಮುಖರಾಗಿದ್ದರು’ ಎಂದು ಹೇಳಿದರು.

ಸಿರಿ ಗನ್ನಡ ವೇದಿಕೆ ಅಧ್ಯಕ್ಷ ಡಾ.ಕೆ.ಎಂ.ಜೆ.ಮೌನಿ, ಕಸಾಪ ನಗರ ಘಟಕದ ಅಧ್ಯಕ್ಷ ಶಿವಕುಮಾರ್, ಕವಿ ಶರಣಪ್ಪ ಕಬ್ಬೂರು, ಹೋರಾಟಗಾರ ಅ.ಕೃ.ಸೋಮಶೇಖರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು