ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜೇಗೌಡರು ರಾಜೀನಾಮೆ ಕೊಟ್ಟು ಗೆಲ್ಲಲಿ: ಶಾಸಕರಿಗೆ ಬಹಿರಂಗ ಸವಾಲು

ಶಾಸಕರಿಗೆ ಸಂಸದ ಮುನಿಸ್ವಾಮಿ ಬಹಿರಂಗ ಸವಾಲು
Last Updated 27 ಮೇ 2020, 14:59 IST
ಅಕ್ಷರ ಗಾತ್ರ

ಕೋಲಾರ: ‘ಗಾಳಿಯಲ್ಲಿ ಗೆದ್ದು ಬಂದಿದ್ದು ನಾನಾ ಅಥವಾ ಅವರಾ ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ನಾನೂ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಂತು ಗೆದ್ದು ಬರುತ್ತೇನೆ. ಅವರಿಗೆ ಸಾಮರ್ಥ್ಯವಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಂತು ಗೆದ್ದು ಬರಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ಮಾಲೂರು ಶಾಸಕ ಕೆ.ವೈ.ನಂಜೇಗೌಡರಿಗೆ ಬಹಿರಂಗ ಸವಾಲು ಹಾಕಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಂಜೇಗೌಡರು ಟೀಕಿಸಿರುವಂತೆ ನಾನು ಗಾಳಿಯಲ್ಲಿ ಗೆದ್ದು ಬಂದವನಲ್ಲ. ಜಿಲ್ಲೆಯ ಜನ ಹಿಂದಿನ ಸಂಸದರ ದುರಾಡಳಿತದಿಂದ ಬೇಸತ್ತು ಪಕ್ಷಾತೀತವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ನಂಜೇಗೌಡರ ಮಾಲೂರು ಕ್ಷೇತ್ರದಲ್ಲೇ ನನಗೆ 37 ಸಾವಿರ ಮತಗಳ ಮುನ್ನಡೆ ಬಂದಿದೆ. ಇದು ಗೊತ್ತಿದ್ದರೂ ವಿನಾಕಾರಣ ಮಾತನಾಡುವ ಅವರಿಗೆ ಲೋಕ ಜ್ಞಾನವಿಲ್ಲ’ ಎಂದು ವ್ಯಂಗ್ಯವಾಡಿದರು.

‘ನಾನು ಚುನಾವಣೆಯಲ್ಲಿ ಆಕಸ್ಮಿಕವಾಗಿ ಗೆದ್ದವನಲ್ಲ. ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ನಂಜೇಗೌಡರು ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಇಂದಿಗೂ ಅವರು ಜಾಮೀನಿನ ಮೇಲೆಯೇ ಹೊರಗಡೆ ಇದ್ದಾರೆ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ದರಖಾಸ್ತು ಸಮಿತಿ ಅಧ್ಯಕ್ಷರಾಗಿದ್ದ ನಂಜೇಗೌಡರ ಮಾತು ಕೇಳಿ ಏನೇನೋ ಮಾಡಿದ ತಹಶೀಲ್ದಾರ್ ಮನೆಗೆ ಹೋಗಿದ್ದಾರೆ. ಈ ಮಹಾನುಭಾವನ ಕಾಟದಿಂದ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರೊಬ್ಬರೂ ಸತ್ತು ಹೋಗಿದ್ದಾರೆ. ಇವೆಲ್ಲಾ ಗೊತ್ತಿರುವ ವಿಚಾರಗಳೇ’ ಎಂದರು.

ಲೂಟಿ ಮಾಡಿದ್ದಾರೆ: ‘ಮಾಲೂರು ತಾಲ್ಲೂಕಿನಲ್ಲಿ ಬೇನಾಮಿ ಹೆಸರುಗಳಲ್ಲಿ 109 ಎಕರೆ ಜಾಗದಲ್ಲಿ ಕ್ರಷರ್‌ ನಡೆಸುತ್ತಿದ್ದಾರೆ. ವಿವಿಧ ಮೂಲಗಳಲ್ಲಿ ಹಣ ಲೂಟಿ ಮಾಡಿದ್ದಾರೆ. ಸರ್ಕಾರಕ್ಕೆ ₹ 62 ಕೋಟಿ ತೆರಿಗೆ ಕಟ್ಟದೆ ಅಕ್ರಮವಾಗಿ ಕ್ರಷರ್‌ ನಡೆಸುತ್ತಿದ್ದಾರೆ. ಅವರ ಅನೇಕ ಕ್ರಷರ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ’ ಎಂದು ಗಂಭೀರ ಆರೋಪ ಮಾಡಿದರು.

‘ನಾನು ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದೇನೆ ಎಂದು ಆರೋಪಿಸಿರುವ ನಂಜೇಗೌಡರು ಯಾವುದೇ ಒಬ್ಬ ಅಧಿಕಾರಿಯಿಂದ ಹೇಳಿಸಿ ಆರೋಪ ಸಾಬೀತುಪಡಿಸಲಿ. ಆ ಕ್ಷಣವೇ ರಾಜೀನಾಮೆ ಕೊಡುತ್ತೇನೆ. ಅವರ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಪತ್ರಗಳಿದ್ದರೆ ಬೀದಿಗಿಳಿದು ಹೋರಾಟ ಮಾಡಲಿ, ನನ್ನ ಅಭ್ಯಂತರವಿಲ್ಲ. ನನ್ನ ಬಳಿಯೂ ಅವರ ಅಕ್ರಮದ ದಾಖಲೆಪತ್ರಗಳಿವೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT