ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಮುನಿಯಪ್ಪ ಟಿಕೆಟ್‌ ತಪ್ಪಿಸಿದರು: ಬಿಜೆಪಿ ಬಂಡಾಯ ಅಭ್ಯರ್ಥಿ ವೀರಯ್ಯ ಆರೋಪ

Last Updated 26 ಮಾರ್ಚ್ 2019, 10:57 IST
ಅಕ್ಷರ ಗಾತ್ರ

ಕೋಲಾರ: ‘ಸಂಸದ ಮುನಿಯಪ್ಪ ಅವರೇ ನನಗೆ ಬಿಜೆಪಿಯ ಟಿಕೆಟ್ ಕೈತಪ್ಪುವಂತೆ ಮಾಡಿದರು. ಅವರ ಕುತಂತ್ರ ರಾಜಕಾರಣಕ್ಕೆ ಮತದಾರರು ಅಂತ್ಯ ಹಾಡಬೇಕು’ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿ.ಎಸ್‌.ವೀರಯ್ಯ ಹೇಳಿದರು.

ನಾಮಪತ್ರ ಸಲ್ಲಿಸಿದ ಬಳಿಕ ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುನಿಯಪ್ಪ ಹಿಂದಿನ 7 ಚುನಾವಣೆಗಳಲ್ಲಿ ಕುತಂತ್ರ ಮಾಡಿಯೇ ಗೆಲುವು ಸಾಧಿಸಿದರು. ಮತದಾರರು ಈ ಬಾರಿ ಅದಕ್ಕೆ ಅವಕಾಶ ನೀಡಬಾರದು’ ಎಂದರು.

‘ಜಿಲ್ಲೆಯಲ್ಲಿ 20 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದೇನೆ. ಮುನಿಯಪ್ಪ ಅವರ ವಿರುದ್ಧ 2004 ಮತ್ತು 2014ರ ಚುನಾಣೆಯಲ್ಲಿ ಕ್ರಮವಾಗಿ 11,800 ಹಾಗೂ 23 ಸಾವಿರ ಮತಗಳ ಅಂತರದಿಂದ ಸೋತಿದ್ದೇನೆ, ಈ ಬಾರಿ ನನಗೆ ಜನರ ಬೆಂಬಲವಿದ್ದು, ಗೆಲ್ಲುವ ವಿಶ್ವಾಸವಿದೆ. ಆದರೆ, ಬಿಜೆಪಿ ನಾಯಕರು ವರಿಷ್ಠರ ದಿಕ್ಕು ತಪ್ಪಿಸಿ ಮುನಿಸ್ವಾಮಿಗೆ ಟಿಕೆಟ್ ಕೊಡಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೋದಿ ಹವಾ ಇರುವ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬೆಂಗಳೂರಿನಿಂದ ಅಭ್ಯರ್ಥಿ ಆಮದು ಮಾಡಿಕೊಳ್ಳುವ ಅಗತ್ಯವೇನಿತ್ತು? ಬಿಜೆಪಿ ಸ್ಥಳೀಯ ಮುಖಂಡರು ನೈತಿಕವಾಗಿ ದಿವಾಳಿಯಾಗಿದ್ದಾರೆ. ಅಭ್ಯರ್ಥಿ ಆಯ್ಕೆಗೆ ಯಾವ ಮಾನದಂಡ ಅನುಸರಿಸಿದ್ದಾರೋ ಗೊತ್ತಿಲ್ಲ, ಹೊಸ ಮುಖ ಕರೆತಂದು ನಿಲ್ಲಿಸುವ ಅಗತ್ಯವಿತ್ತೇ?’ ಎಂದು ಪ್ರಶ್ನಿಸಿದರು.

ಸಾಧನೆ ಶೂನ್ಯ: ‘ಸತತವಾಗಿ ವಿಧಾನ ಪರಿಷತ್‌ನಲ್ಲಿ ಜಿಲ್ಲೆಯ ಪರ ಧ್ವನಿ ಎತ್ತಿದ್ದೇನೆ. ಟೊಮೆಟೊ, ಮಾವು, ತರಕಾರಿ ಮತ್ತು ರೇಷ್ಮೆಗೆ ಬೆಂಬಲ ಬೆಲೆ ನೀಡಲು ಮುನಿಯಪ್ಪ 3 ದಶಕದಲ್ಲಿ ಏನು ಮಾಡಿದ್ದಾರೆ. ಕ್ಷೇತ್ರದಲ್ಲಿ ಅವರ ಸಾಧನೆ ಶೂನ್ಯ’ ಎಂದು ಟೀಕಿಸಿದರು.

‘ಮುನಿಯಪ್ಪರ ಪಾಪ ಕೊಡ ತುಂಬಿದೆ. ಜಾತಿಯ ವಿಷ ಬೀಜ ಬಿತ್ತಿದ್ದೇ ಅವರ ಸಾಧನೆ. ಪರಿಶಿಷ್ಟರನ್ನು ವಿಭಜಿಸಿ ದಾರಿ ತಪ್ಪಿಸುವ ಅವರ ಕುಕೃತ್ಯಕ್ಕೆ ಸೋಲು ಕಾದಿದೆ. ಪ್ರಜಾತಂತ್ರವನ್ನು ದಾರಿಗೆ ತಪ್ಪಿಸುವ ಅವರಿಗೆ ಸ್ವಪಕ್ಷಿಯರೇ ತಕ್ಕ ಪಾಠ ಕಲಿಸಲು ಸಿದ್ಧತೆ ನಡೆಸಿದ್ದಾರೆ. ಮುನಿಯಪ್ಪರ ವಿರೋಧ ಬಣದ ಜತೆ ಚರ್ಚಿಸಿ ಬೆಂಬಲ ಕೋರುತ್ತೇನೆ’ ಎಂದರು.

ಸಮಯ ಮಿಂಚಿಲ್ಲ: ‘ವರಿಷ್ಠರು ಅನರ್ಹರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಗೆಲ್ಲುವ ಸ್ಥಾನ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಈಗಲೂ ಸಮಯ ಮಿಂಚಿಲ್ಲ. ವರಿಷ್ಠರ ಮೇಲೆ ಒತ್ತಡ ಹಾಕಿ ವೀರಯ್ಯ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶ್ ಹೇಳಿದರು.

‘ವೀರಯ್ಯ ಅವರಿಗೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವ ಭೋವಿ ಸಮುದಾಯದವರ ಬೆಂಬಲ ಕೊಡಿಸುತ್ತೇನೆ. ಮುನಿಸ್ವಾಮಿ ಅವರ ಅಪರಾಧ ಹಿನ್ನೆಲೆ ಬಗ್ಗೆ ವರಿಷ್ಠರಿಗೆ ಮತ್ತು ರಾಜ್ಯ ನಾಯಕರಿಗೆ ವರದಿ ಹೋಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT