ಸಂಸದ ನಗರ ಪ್ರದಕ್ಷಿಣೆ: ಸಮಸ್ಯೆ ದಿಗ್ದರ್ಶನ

ಬುಧವಾರ, ಜೂನ್ 26, 2019
28 °C
ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಪೌರಕಾರ್ಮಿಕರಿಂದ ದೂರು

ಸಂಸದ ನಗರ ಪ್ರದಕ್ಷಿಣೆ: ಸಮಸ್ಯೆ ದಿಗ್ದರ್ಶನ

Published:
Updated:
Prajavani

 ಕೋಲಾರ: ನಗರದಲ್ಲಿ ಬುಧವಾರ ಬೆಳಿಗ್ಗೆ ಬೈಕ್‌ ಏರಿ ನಗರ ಪ್ರದಕ್ಷಿಣೆ ನಡೆಸಿದ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಮೂಲಸೌಕರ್ಯ ಸಮಸ್ಯೆಯ ದಿಗ್ದರ್ಶನವಾಯಿತು.

ಗುಂಡಿಮಯ ರಸ್ತೆಗಳು, ಚರಂಡಿಗಳಿಂದ ಹೊರಗೆ ಹರಿಯುತ್ತಿದ್ದ ಕೊಳಚೆ ನೀರು ಹಾಗೂ ರಸ್ತೆ ಬದಿಯ ಕಸದ ರಾಶಿ ಕಂಡು ಅಸಮಾಧಾನಗೊಂಡ ಸಂಸದ ಎಸ್.ಮುನಿಸ್ವಾಮಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎಂಜಿ ರಸ್ತೆ, ಕಠಾರಿಪಾಳ್ಯ, ಬಸ್‌ ನಿಲ್ದಾಣ ವೃತ್ತ, ಬಂಬೂ ಬಜಾರ್ ರಸ್ತೆ, ಅಂತರಗಂಗೆ ರಸ್ತೆ, ಡೂಂಲೈಟ್ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿದ ಎಸ್.ಮುನಿಸ್ವಾಮಿ ಸಾರ್ವಜನಿಕರ ಸಮಸ್ಯೆ ಆಲಿಸಿ ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರ ಚರ್ಚಿಸಿದಾಗ ಸಕಾಲಕ್ಕೆ ವೇತನ ಪಾವತಿ, ಆರೋಗ್ಯ ತಪಾಸಣೆ, ಸುರಕ್ಷ ಸಮಾಗ್ರಿಗಳನ್ನು ನೀಡದೆ ಇರುವ ಹಾಗೂ ಆರೋಗ್ಯ ನಿರೀಕ್ಷಕರು ನೀಡುತ್ತಿರುವ ಕಿರುಕುಳ ಬಗ್ಗೆ ಸಂಸದರ ಗಮನಕ್ಕೆ ತಂದರು.

‘ನಗರದ ಸ್ವಚ್ಛತೆ ಕಾಪಾಡಲು ಕಾರ್ಮಿಕರು ಚಳಿ, ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಕೆಲಸ ಮಾಡುತ್ತಾರೆ. ಕನಿಷ್ಟ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಗಳನ್ನು ನೀಡಲು ಅಗಿಲ್ಲವೆಂದರೆ ನಿಮ್ಮಿಂದ ಇನ್ನೇನು ಅಗುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯ ನಿರೀಕ್ಷಕಿ ಮರಿಯಾ, ‘ಪೌರ ಕಾರ್ಮಿಕರಿಗೆ ಸುರಕ್ಷಾ ಕೀಟ್ ನೀಡಲಾಗಿದೆ. ಅದನ್ನು ಅವರು ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಸಮರ್ಥಿಸಿಕೊಂಡರು. ಮಧ್ಯಪ್ರವೇಶ ಮಾಡಿದ ಪೌರಕಾರ್ಮಿಕರು ತಾವು ವೀಕ್ಷಣೆಗೆ ಬರುವುದು ಗೊತ್ತಾಗಿ ತರಾತುರಿಯಲ್ಲಿ ತಂದು ಕೊಟ್ಟಿದ್ದಾರೆ. ಕೇಳಿದಕ್ಕೆ ಸುಮ್ಮನೆ ಹಾಕಿಕೊಳ್ಳಬೇಕು’ ಎಂದು ತಾಕೀತು ಮಾಡಿದರು’ ಎಂದು ದೂರಿದರು.

‘ಕೆಲ ಹೊರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರು ಖಾಯಂ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ವೇತನ ಪಾವತಿಯಲ್ಲೂ ಅಧಿಕಾರಿಗಳು ತಾರತಮ್ಯ ಅನುಸರಿಸುತ್ತಿದ್ದಾರೆ. ಜತೆಗೆ ಸಿಎಸ್‌ಐ, ಪಿಎಫ್‌ ಸಹ ಪಾವತಿಯಾಗುತ್ತಿಲ್ಲ’ ಎಂದು ದೂರು ನೀಡಿದರು.

ಇದರಿಂದ ಆಕ್ರೋಶಗೊಂಡ ಸಂಸದ ಎಸ್.ಮುನಿಸ್ವಾಮಿ, ‘ಕೆಲಸ ಮಾಡುವವರಿಗೆ ಸಹಕಾರ ನೀಡಬೇಕು. ಪೌರಕಾರ್ಮಿಕರು ಮನುಷ್ಯರಲ್ಲವೆ, ಅವರಿಗೆ ಸೌಕರ್ಯ ಕಲ್ಪಿಸಬೇಕು ಎಂಬ ಸೌಜನ್ಯವೂ ಇಲ್ಲವೆ’ ಎಂದು ಆರೋಗ್ಯ ನಿರೀಕ್ಷಿ ಹಾಗೂ ಪೌರಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

‘ವರ್ಗಾವಣೆಯಾಗಿದ್ದರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಇಲ್ಲೆ ಮುಂದುವರೆದಿದ್ದೀರ, ನೀವೆಲ್ಲಾ ಕಸದಿಂದ ರಸ ತಿನ್ನ ಬಹುದೆಂದು ಇಲ್ಲಿಗೆ ಪತ್ತೆ ಬಂದಿರಬಹುದು. ಜನರ ಕೆಲಸ ಮಾಡದಿದ್ದರೆ ಏನು ಕ್ರಮಕೈಗೊಳ್ಳಬೇಕು ಎಂಬುದು ಗೊತ್ತಿದೆ. ಕಸ ವಿಲೇವಾರಿ 10 ಎಕರೆ ಜಾಗ ನೀಡಿದ್ದರೂ ಯಾಕೆ ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಪೌರಯುಕ್ತರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಯುಕ್ತ ಸತ್ಯನಾರಾಯಣ, ‘ಸಂಪೂರ್ಣವಾಗಿ ಜಾಗ ನಗರಸಭೆಗೆ ಹಸ್ತಾಂತರವಾಗಿಲ್ಲ. ಪೌರಕಾರ್ಮಿಕರ ಕೊರತೆಯಿದ್ದರೂ ಸಮರ್ಪಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಹೊರಗುತ್ತಿಗೆ ಪೌರಕಾರ್ಮಿಕರಿಗೆ ಎರಡು ತಿಂಗಳ ವೇತನ ಬಾಕಿ ಇದೆ’ ಎಂದು ತಿಳಿಸಿದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ‘ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಹಂತಹಂತವಾಗಿ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

‘ಕೆಲ ಗಂಭೀರ ಸಮಸ್ಯೆಗಳು ಇದ್ದು, ಸ್ಥಳೀಯ ಶಾಸಕರ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಬೇಕಾಗಿದೆ. ನಗರ ಪ್ರದಕ್ಷಿಣೆ ಮಾಡುವಾಗ ಸಾರ್ವಜನಿಕರಿಂದಲ್ಲೂ ದೂರುಗಳು ಬಂದಿವೆ. ಸ್ವಚ್ಛತೆ ಮಾಡಲು ನಾಗರಿಕರೂ ಸಹಕಾರ ನೀಡಬೇಕು. ಎಲ್ಲಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಬಿಡಬೇಕು’ ಎಂದು ಸಲಹೆ ನೀಡಿದರು.

‘ಎಲ್ಲಂದರಲ್ಲಿ ಯುಜಿಡಿ ಹೋಲ್‌ಗಳು ಹಾನಿಯಾಗಿದ್ದು, ತ್ಯಾಜ್ಯ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡು ಬಂದಿದೆ. ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಕಸ ವಿಲೇವಾರಿಗೆ ಹೆಚ್ಚುವರಿ ವಾಹನಗಳನ್ನು ಖರೀದಿ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಅನುಮೂದನೆ ನೀಡಿದ್ದು, ಕೂಡಲೇ ಖರೀದಿಸಲು ಸೂಚಿಸಲಾಗಿದೆ’ ಎಂದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !