ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಹಂಗಾಮಿಗೆ ಬಾರದ ಬಿತ್ತನೆ ಬೀಜ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ತೀವ್ರ ಅಸಮಾಧಾನ
Last Updated 20 ಮೇ 2020, 16:35 IST
ಅಕ್ಷರ ಗಾತ್ರ

ಮುಳಬಾಗಿಲು: ಪೂರ್ವ ಮುಂಗಾರು ಹಂಗಾಮು ಮುಗಿದರೂ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ಸರಬರಾಜು ಮಾಡುತ್ತಿಲ್ಲ. ಹೀಗಾಗಿ ನೆರೆಯ ಆಂಧ್ರಪ್ರದೇಶದ ಖಾಸಗಿಯವರಿಂದ ಬಿತ್ತನೆ ಬೀಜ ಕೊಳ್ಳಬೇಕಾಗಿ ಬಂದಿದೆ ಎಂದು ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ದೂರಿದರು.

ಸದಸ್ಯರಾದ ಸಿ.ವಿ.ಗೋಪಾಲ್‌, ಮಾರಾಪ್ಪ ಮಾತನಾಡಿ, ಹಂಗಾಮು ಮುಗಿದರೂ ನೆಲಗಡಲೆ ಬಿತ್ತನೆ ಬೀಜ ರೈತರಿಗೆ ಸಿಕ್ಕಿಲ್ಲ ಎಂದು ದೂರಿದಾಗ, ಸಭೆಯಲ್ಲಿದ್ದ ಕೃಷಿ ಅಧಿಕಾರಿಗಳು, ‘ಕಳೆದ ವಾರ ಬಂದಿದ್ದ ಬಿತ್ತನೆ ಬೀಜ ಕಳಪೆ ಮಟ್ಟದ್ದಾಗಿದ್ದವು. ಅವುಗಳನ್ನು ವಾಪಸ್ಸು ಕಳುಹಿಸಲಾಗಿದೆ. ಮತ್ತೆ 450 ಕ್ವಿಂಟಲ್‌ ಬೀಜ ಬಂದಿದೆ. ಮುಂದಿನ ಸೋಮವಾರದಿಂದ ರೈತ ಸಂಪರ್ಕ ಕೇಂದ್ರದಿಂದ ಸರಬರಾಜು ಮಾಡುತ್ತೇವೆ’ ಎಂದು ಉತ್ತರಿಸಿದರು.

ಕುಡಿಯುವ ನೀರಿನ ಅನುದಾನವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ) ಸರಿಯಾಗಿ ವಿನಿಯೋಗಿಸಿಲ್ಲ. ಇಚ್ಚೆಯಂತೆ ವೆಚ್ಚ ಮಾಡಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಗೆ ಹರಿದಿಲ್ಲ. ಎಲ್ಲ ಪಿಡಿಒಗಳ ಸಭೆ ಕರೆಯಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸದಸ್ಯರಾದ ಶ್ರೀನಾಥ್, ಜಿ.ಗಂಗಿರೆಡ್ಡಿ, ಹರೀಶ್, ಆವಣಿ ರವಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಂಗಲಿಯಲ್ಲಿ ಕೊಳವೆ ಬಾವಿ ಕೊರೆಸಿ ಆರು ತಿಂಗಳಾದರೂ ಮೋಟರ್ ಆಳವಡಿಸಿಲ್ಲ. ಇದೇ ಪರಿಸ್ಥಿತಿ ಕವತನಹಳ್ಳಿ ಮತ್ತು ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿದೆ ಎಂದು ದೂರಿದರು.

ತಾಲ್ಲೂಕಿಗೆ 47 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಲು ಅಬಕಾರಿ ಸಚಿವ ಎಚ್.ನಾಗೇಶ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಸದ್ಯಕ್ಕೆ 17 ಘಟಕಗಳು ಮಾತ್ರ ಮಂಜೂರು ಆಗಿವೆ. ತೀರಾ ಅಗತ್ಯವಿರುವ ಹಳ್ಳಿಗಳಲ್ಲಿ ಈ ಘಟಕಗಳನ್ನು ನಿರ್ಮಿಸಲಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಸಭೆಗೆ
ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ ಮಾತನಾಡಿ, ಕೊರೊನಾ ಸೋಂಕಿತರ ಸ್ಥಿತಿ ಸುಧಾರಿಸುತ್ತಿದೆ. ಅವರ ಸಂಪರ್ಕಕ್ಕೆ ಬಂದ 17 ಮಂದಿಯ ವರದಿ ಸಹ ನೆಗೆಟೀವ್‌ ಬಂದಿದೆ. ತಾಲ್ಲೂಕಿನಲ್ಲಿ ಒಟ್ಟು 198 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದರು. ತಹಶೀಲ್ದಾರ್ ಕೆ.ಎನ್.ರಾಜಶೇಖರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು ಭಾಗವಹಿಸಿದ್ದರು.

*

103 ಕೊಳವೆಬಾವಿಗಳ ಆಳವನ್ನು ಹೆಚ್ಚಿಸಲಾಗಿದೆ. 88 ಗ್ರಾಮಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ.
-ವಸಂತಕುಮಾರ್, ಕುಡಿಯುವ ನೀರಿನ ಪ್ರಭಾರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT