ನಗರಸಭೆ ಅವ್ಯವಸ್ಥೆಗೆ ಜಿಲ್ಲಾಧಿಕಾರಿ ಕೆಂಡಾಮಂಡಲ

ಮಂಗಳವಾರ, ಜೂನ್ 25, 2019
22 °C
ಕಚೇರಿಗೆ ದಿಢೀರ್‌ ಭೇಟಿ: ಅಧಿಕಾರಿಗಳು– ಸಿಬ್ಬಂದಿಗೆ ತೀವ್ರ ತರಾಟೆ

ನಗರಸಭೆ ಅವ್ಯವಸ್ಥೆಗೆ ಜಿಲ್ಲಾಧಿಕಾರಿ ಕೆಂಡಾಮಂಡಲ

Published:
Updated:
Prajavani

ಕೋಲಾರ: ಇಲ್ಲಿನ ನಗರಸಭೆಗೆ ಈಚೆಗೆ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರಸಭೆ ಸಿಬ್ಬಂದಿಯ ಹಾಜರಾತಿ ಪುಸ್ತಕ ಪರಿಶೀಲಿಸಿದ ಜಿಲ್ಲಾಧಿಕಾರಿಯು ಪ್ರತಿ ವಿಭಾಗದ ಸಿಬ್ಬಂದಿಯ ಕೆಲಸದ ಸ್ವರೂಪ ಹಾಗೂ ಜವಾಬ್ದಾರಿ ಕುರಿತು ವಿಚಾರಿಸಿ ಮಾಹಿತಿ ಪಡೆದರು. ಯುಜಿಡಿ, ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ, ಸಾರ್ವಜನಿಕರ ದೂರು ನಿರ್ವಹಣೆ, ತೆರಿಗೆ ಸಂಗ್ರಹದ ಬಗ್ಗೆ ಪರಿಶೀಲನೆ ನಡೆಸಿದರು.

ನಗರಸಭೆಯಲ್ಲಿದ್ದ ಕೆಲ ಸಾರ್ವಜನಿಕರು ತಮ್ಮ ಬಡಾವಣೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾದ ಬಗ್ಗೆ ಮತ್ತು ಯುಜಿಡಿ ಸಮಸ್ಯೆ ಸಂಬಂಧ ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡರು.

‘ನಗರದಲ್ಲಿ ಸುಮಾರು 2,500 ಅಂಗಡಿಗಳಿದ್ದು, ಮಾರ್ಚ್ ಅಂತ್ಯಕ್ಕೆ ವಾಣಿಜ್ಯ ಪರವಾನಗಿ ಅವಧಿ ಮುಗಿದಿದೆ. ಹೀಗಾಗಿ ಅಂಗಡಿ ಮಾಲೀಕರು ಏಪ್ರಿಲ್ ಆರಂಭದಲ್ಲೇ ಪರವಾನಗಿ ನವೀಕರಿಸಿಕೊಳ್ಳಬೇಕಿತ್ತು. ಆದರೆ, 200 ಅಂಗಡಿಗಳ ಮಾಲೀಕರು ಮಾತ್ರ ಪರವಾನಗಿ ನವೀಕರಿಸಿಕೊಂಡಿದ್ದಾರೆ. ಉಳಿದ ಅಂಗಡಿ ಮಾಲೀಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?’ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಪ್ರಶ್ನಿಸಿದರು.

‘ನಗರದ ಅಂಗಡಿ ಮಾಲೀಕರು 2 ದಿನದೊಳಗೆ ತೆರಿಗೆ ಪಾವತಿಸಿ ವಾಣಿಜ್ಯ ಪರವಾನಗಿ ನವೀಕರಿಸಿಕೊಳ್ಳದಿದ್ದರೆ ಅಂಗಡಿಗಳಿಗೆ ಬೀಗ ಮುದ್ರೆ ಹಾಕಿ’ ಎಂದು ಆದೇಶಿಸಿದರು.

ದೂರು ಬರುತ್ತಿವೆ: ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ. ‘ನಗರಸಭೆಯ ಚುನಾಯಿತ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು, ಹೊಸದಾಗಿ ಚುನಾವಣೆ ನಡೆಯಬೇಕಿತ್ತು. ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನು ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದರು.

‘ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದೀಗ ಮಳೆ ಬಂದು ಮನೆಗಳಿಗೆ ನೀರು ನುಗ್ಗಿರುವುದು, ಯುಜಿಡಿ ಮತ್ತು ಚರಂಡಿ ಕಟ್ಟಿಕೊಂಡಿರುವುದು, ಕುಡಿಯುವ ನೀರು, ನೈರ್ಮಲ್ಯ ಸಮಸ್ಯೆ ಸಂಬಂಧ ಜನರಿಗೆ ಪ್ರತಿನಿತ್ಯ ದೂರು ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿಗೆ ಕೆಲಸ ಹಂಚಿದ್ದೇನೆ’ ಎಂದು ವಿವರಿಸಿದರು.

‘ಪೌರ ಕಾರ್ಮಿಕರ ವೇತನ ಬಾಕಿ, ಸಿಬ್ಬಂದಿ ಕೊರತೆ, ಕೆಲ ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ನಗರಸಭೆಯು ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಬೇಕು. ನಾಗರೀಕರು ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸಿದರೆ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಉತ್ತಮ ಆಡಳಿತಕ್ಕೆ ಜನ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ನಿರ್ಲಕ್ಷ್ಯ ತೋರಿದ್ದೀರಿ: ಅರ್ಜಿ ವಿಲೇವಾರಿಯಲ್ಲಿನ ವಿಳಂಬ ಸಂಬಂಧ ವಸತಿ ವಿಭಾಗದ ನೌಕರ ಜೀವನ್ ಮತ್ತು ಕಂದಾಯ ವಿಭಾಗದ ನೌಕರ ನಟರಾಜ್‌ ವಿರುದ್ಧ ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ‘ಸಕಾಲಕ್ಕೆ ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಬೇಕು. ಒಬ್ಬರು ಮಾಡುವ ತಪ್ಪಿನಿಂದ ಇಡೀ ಆಡಳಿತ ಯಂತ್ರಕ್ಕೆ ಕೆಟ್ಟ ಹೆಸರು ಬರುತ್ತದೆ. ದಾಖಲೆಪತ್ರ ಸರಿಯಿಲ್ಲದಿದ್ದರೆ ಹಿಂಬರಹ ಕೊಟ್ಟು ಕಳುಹಿಸಿ. ಈ ರೀತಿ ವಿಳಂಬ ಮಾಡುವುದರಿಂದ ನಿಮಗೇನು ಲಾಭ?’ ಎಂದು ತರಾಟೆಗೆ ತೆಗೆದುಕೊಂಡರು.

ನೀರು ಹಾಗೂ ಯುಜಿಡಿ ಸಮಸ್ಯೆ ಸಂಬಂಧ ಎಂಜಿನಿಯರ್‌ಗಳಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ, ‘ನೀವು ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ? ಮಳೆ ಬರುತ್ತದೆ ಎಂಬ ಅರಿವಿರುವಾಗ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು. ಆದರೆ, ನಿರ್ಲಕ್ಷ್ಯ ತೋರಿದ್ದೀರಿ’ ಎಂದು ಕಿಡಿಕಾರಿದರು.

‘ನಿವೇಶನರಹಿತ ಪೌರ ಕಾರ್ಮಿಕರಿಗೆ 10 ದಿನದಲ್ಲಿ ಹಕ್ಕುಪತ್ರ ವಿತರಿಸಬೇಕು. ಅವರಿಗಾಗಿ ಕಾಯ್ದಿರಿಸಿರುವ ಬಡಾವಣೆ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದರೆ ಅನುದಾನ ಬಿಡುಗಡೆ ಮಾಡಲಾಗುವುದು. ಆಯುಕ್ತರು ನಿಯಮಿತವಾಗಿ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು’ ಎಂದು ಸೂಚಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !