ನಗರಸಭೆ ಚುನಾವಣೆ: ಅಭ್ಯರ್ಥಿ ಘೋಷಣೆಗೆ ಒತ್ತಾಯ

7
ಗಾಂಧಿನಗರ ನಿವಾಸಿಗಳಿಂದ ಶಾಸಕ ಕೆ.ಶ್ರೀನಿವಾಸಗೌಡರಿಗೆ ಮುತ್ತಿಗೆ

ನಗರಸಭೆ ಚುನಾವಣೆ: ಅಭ್ಯರ್ಥಿ ಘೋಷಣೆಗೆ ಒತ್ತಾಯ

Published:
Updated:
Deccan Herald

ಕೋಲಾರ: ನಗರಸಭೆ ಚುನಾವಣೆಗೆ ಐದಾರು ತಿಂಗಳು ಬಾಕಿ ಇದ್ದು, ಆಕಾಂಕ್ಷಿಗಳು ಶಾಸಕ ಕೆ.ಶ್ರೀನಿವಾಸಗೌಡರಿಗೆ ಭಾನುವಾರ ಮುತ್ತಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದರು.

ನಗರದ 2ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಬೇಕು. ಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ಹಲವು ಮಂದಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಗಾಂಧಿನಗರದ ನಿವಾಸಿಗಳು ಪಟ್ಟು ಹಿಡಿದರು.

‘ಗಾಂಧಿನಗರ ಜೆಡಿಎಸ್‌ ಭದ್ರ ಕೋಟೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲೂ ಅತಿ ಹೆಚ್ಚು ಮತಗಳು ಜೆಡಿಎಸ್‌ಗೆ ಬಂದಿವೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಲೆಕ್ಕಕ್ಕೂ ಇಲ್ಲದಾಗಿದೆ. ಹೆಚ್ಚು ಮಂದಿ ಪ್ರಚಾರ ನಡೆಸಿದರೆ ಮತದಾರರು ಚದುರಿ ಹೋಗುವ ಸಾಧ್ಯತೆಗಳಿವೆ’ ಎಂದು ನಿವಾಸಿ ನಾಗೇಶ್ ಬೇಸರ ವ್ಯಕ್ತಪಡಿಸಿದರು.

‘ವಾರ್ಡ್‌ನಲ್ಲಿ ಸುಮಾರು ವರ್ಷಗಳಿಂದ ಪ್ರವೀಣ್ ಗೌಡ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚಿಗೆ ನಡೆದ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದಾರೆ. ಸಮಾಜಿಕ ಕಾರ್ಯಗಳನ್ನು ನಡೆಸುವ ಮೂಲಕ ನಿವಾಸಿಗಳನ್ನು ವಿಶ್ವಾಸದಲ್ಲಿಟ್ಟುಕೊಂಡಿದ್ದಾರೆ’ ಎಂದು ಶಾಸಕರ ಗಮನ ಸೆಳೆದರು.

‘ಹಿಂದೆ ನಗರಸಭೆ ಚುನಾವಣೆಯಲ್ಲಿ ಸಿಪಿಎಂ ಪಕ್ಷದೊಂದಿಗೆ ಒಂದಾಣಿಕೆ ಮಾಡಿಕೊಂಡು ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿದೀರಿ. ಈಗ ಮತ್ತೆ ಅವರಿಗೆ ಅವಕಾಶ ನೀಡಿದರೆ ಪಕ್ಷ ಬಣಗಳಾಗಿ ವಿಂಗಡಣೆಯಾಗುತ್ತದೆ. ವಾರ್ಡಿನ ಅಭ್ಯರ್ಥಿಯನ್ನು ಕೂಡಲೇ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರವೀಣ್ ಗೌಡ ಸೇವೆಯನ್ನು ಪರಿಗಣಿಸಿ ಟಿಕೆಟ್ ನೀಡಬೇಕು. ಅವರಿಗೆ ಬಿಟ್ಟು, ಬೇರೆ ಯಾರಿಗದರೂ ಟಿಕೆಟ್ ನೀಡಿದ್ದ ಆದರೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಈ ಬಾರಿ ಟಿಕೆಟ್ ನೀಡುವ ಸಂಬಂಧ ಪಕ್ಷದ ವರಿಷ್ಠರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಕುರಿತು ಇನ್ನು ಯಾವುದೇ ಚರ್ಚೆ ನಡೆದಿಲ್ಲ. ಸ್ವಲ್ಪ ದಿನ ಕಾಯಬೇಕು’ ಎಂದು ಭರವಸೆ ನೀಡಿದ ಮೇಲೆ, ನಿವಾಸಿಗಳು ವಾಪಸ್ಸು ತೆರಳಿದರು.

ಗಾಂಧಿನಗರದ ನಿವಾಸಿಗಳಾದ ಅನಿಲ್, ಬಾಲಾಜಿ, ಮುನಿರಾಜು ಮುತ್ತಿಗೆ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !