ಗುರುವಾರ , ನವೆಂಬರ್ 21, 2019
24 °C

ಕೋಲಾರ ನಗರಸಭೆ ಚುನಾವಣೆ: ಬೆಂಬಲಕ್ಕೆ ಸಿಪಿಎಂ ಮನವಿ

Published:
Updated:

ಕೋಲಾರ: ‘ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಸಿಪಿಎಂ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸಬೇಕು’ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ.ಶ್ರೀನಿವಾಸ್ ಕೋರಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಿಂದೆ ಕೆಜಿಎಫ್ ಮತ್ತು ಕೋಲಾರದ ಕೆಲ ವಾರ್ಡ್‌ಗಳಲ್ಲಿ ಸಿಪಿಎಂನಿಂದ ಸದಸ್ಯರಾಗಿದ್ದವರು, ವಾರ್ಡನ್ನು ಅಭಿವೃದ್ಧಿಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ, ಅವರ ಸೇವೆಯನ್ನು ಪರಿಗಣಿಸಿ ಬೆಂಬಲಿಸಬೇಕು’ ಎಂದರು.

‘ಕೋಲಾರ ನಗರದ ಗಾಂಧಿನಗರದಿಂದ (2ನೇ ವಾರ್ಡ್‌) ಪಿ.ವೆಂಕಟರಮಣಪ್ಪ, ಪಾಲಸಂದ್ರ ಲೇ ಔಟ್ (7ನೇ ವಾರ್ಡ್)ನಿಂದ ಗಾಂಧಿನಗರ ನಾರಾಯಣಸ್ವಾಮಿ, ಕೆಜಿಎಫ್‌ ನಗರದ ಎಡ್‌ಗರ್ಸ್‌ ಬಡಾವಣೆಯಿಂದ (8ನೇ ವಾರ್ಡ್‌) ಪಿ.ತಂಗರಾಜ್, ಚಿನ್ನಕಣ್ಣು ಬಡಾವಣೆಯಿಂದ (10ನೇ ವಾರ್ಡ್‌) ಟಿ.ಶಿವರಾಜ್ ಹಾಗೂ ಮುಳಬಾಗಿಲು ನಗರದ ವೀರಭದ್ರನಗರ (8ನೇ ವಾರ್ಡ್‌)ದಿಂದ ಚಿಕ್ಕರೆಡ್ಡಮ್ಮ ಸ್ಪರ್ಧಿಸಿದ್ದಾರೆ’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಬಡವರ ಹಾಗೂ ಮಧ್ಯವರ್ಗದವರ ಉತ್ತಮ ಬದುಕಿಗಾಗಿ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಿಂದೆ ಸದಸ್ಯರಾಗಿದ್ದಾಗ ನಿವೇಶನ, ವಸತಿ ರಹಿತರಿಗೆ ಮನೆ ಕಲ್ಪಿಸುವುದು, ಬಡಾವಣೆಯ ಸ್ವಚ್ಛತೆ, ಬೀದಿ ದೀಪ, ಚರಂಡಿ, ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಬೇಡಿಕೆ ಈಡೇರದಿದ್ದಾಗ ಹೋರಾಟ ನಡೆಸಿ ಕೆಲಸ ಮಾಡಿಸಿದ್ದು, ಮತ್ತೊಮ್ಮೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಪಾಲಸಂದ್ರ ಲೇಔಟ್ ಅಭ್ಯರ್ಥಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಹಿಂದೆ ಸದಸ್ಯನಾಗಿದ್ದಾಗ ಗಾಂಧಿನಗರವನ್ನು ಶಕ್ತಿಮೀರಿ ಅಭಿವೃದ್ಧಿ ಪಡಿಸಿದ್ದೆನೆ. ಗುಡಿಸಲು ಮುಕ್ತ ಬಡಾವಣೆಯನ್ನಾಗಿ ನಿರ್ಮಾಣ ಮಾಡಿದ್ದು, ಕುಡಿಯುವ ನೀರು ಸೌಕರ್ಯ ಕಲ್ಪಿಸಲು ಸಂಪ್‌, ಕೊಳವೆಬಾವಿಗಳನ್ನು ಕೊರೆಸಲಾಗಿದೆ’ ಎಂದು ವಿವರಿಸಿದರು.

‘ಈಗ ಸ್ಪರ್ಧಿಸುತ್ತಿರುವ ಬಡಾವಣೆಯ ಜನಕ್ಕೆ ನಾನು ಪರಿಚಿತನಾಗಿದ್ದು, ಮನೆಮನೆಗೆ ತೆರಳಿ ಪ್ರಚಾರ ನಡೆಸಲಾಗುತ್ತಿದೆ, ಇದಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಡಾವಣೆಯ ಹಿತದೃಷ್ಟಿಯಿಂದ ಮತ ಹಾಕಬೇಕು’ ಎಂದು ಕೋರಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಂಬರೀಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)