ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಚುನಾವಣೆ: ಹೊಂದಾಣಿಕೆ ಇಲ್ಲ

‘ನಮ್ಮ ಕಾಂಗ್ರೆಸ್‌’ ಪಕ್ಷದ ಸಭೆಯಲ್ಲಿ ವರ್ತೂರು ಪ್ರಕಾಶ್ ಘೋಷಣೆ
Last Updated 25 ಅಕ್ಟೋಬರ್ 2019, 14:22 IST
ಅಕ್ಷರ ಗಾತ್ರ

ಕೋಲಾರ: ‘ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳದೆ ಕೋಲಾರದ 35 ವಾರ್ಡ್‌ನಲ್ಲೂ ನಮ್ಮ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಘೋಷಿಸಿದರು.

ಇಲ್ಲಿ ಶುಕ್ರವಾರ ನಡೆದ ನಮ್ಮ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ‘ಶಾಸಕ ಶ್ರೀನಿವಾಸಗೌಡರು ಒಂದೂವರೆ ವರ್ಷದಿಂದಲೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರು ಶಾಸಕರಾದ ನಂತರ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ವಾಗ್ದಾಳಿ ನಡೆಸಿದರು.

‘ಮೊದಲು ಕೋಲಾರಕ್ಕೆ ಬಂದ ಸಂದರ್ಭದಲ್ಲಿ ನಗರಸಭೆ ಚುನಾವಣೆಯಲ್ಲಿ ನನ್ನ ಬಣದ 17 ಅಭ್ಯರ್ಥಿಗಳು ಗೆದ್ದಿದ್ದರು. 2ನೇ ಬಾರಿಯ ಚುನಾವಣೆಯಲ್ಲಿ ಸ್ವಲ್ಪ ಸಮಸ್ಯೆಯಾಯಿತು. ಆದರೆ, ಈ ಬಾರಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡುವುದಿಲ್ಲ. ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳದೆ ನಮ್ಮ ಕಾಂಗ್ರೆಸ್ ಪಕ್ಷದಿಂದಲೇ ಬಿ ಫಾರಂ ಕೊಟ್ಟು ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ’ ಎಂದರು.

‘ನಾನು ಶಾಸಕನಾಗಿದ್ದಾಗ ಮಂಜೂರಾಗಿದ್ದ ಕಾಮಗಾರಿಗಳು ಇನ್ನೂ ಮುಂದುವರಿಯುತ್ತಿವೆ. ಶ್ರೀನಿವಾಸಗೌಡರು ಶಾಸಕರಾದ ನಂತರ ಕನಿಷ್ಠ ಒಂದು ಕೊಳವೆ ಬಾವಿ ಕೊರೆಸಿಲ್ಲ. ಕೆಟ್ಟಿರುವ ಕೊಳವೆ ಬಾವಿ ಸಹ ದುರಸ್ತಿ ಮಾಡಿಸಿಲ್ಲ. ಬೀದಿ ದೀಪ ಸಹ ಹಾಕಿಸಿಲ್ಲ. ಜಿಲ್ಲಾ ಕೇಂದ್ರದ ರಸ್ತೆಗಳು ಗುಂಡಿಮಯವಾಗಿವೆ. ಶ್ರೀನಿವಾಸಗೌಡರ ವೈಫಲ್ಯಗಳನ್ನು ಪಟ್ಟಿ ಮಾಡಿ ಜನರ ಮುಂದಿಡುತ್ತೇನೆ’ ಎಂದು ಗುಡುಗಿದರು.

ಸಂಬಂಧ ಚೆನ್ನಾಗಿದೆ: ‘ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರೊಂದಿಗೆ ನನ್ನ ಸಂಬಂಧ ಚೆನ್ನಾಗಿದೆ. ಆದರೂ ಚುನಾವಣೆಯಲ್ಲಿ ಅವರಿಗೆ ಬೆಂಬಲ ನೀಡುತ್ತಿಲ್ಲ. ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಚುನಾವಣೆ ಎದುರಿಸುತ್ತೇವೆ. ಈ ಬಾರಿ ನಗರಸಭೆಯಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೇ ವಾರ್ಡ್‌ಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಮಾಡಿ ಅ.28ರೊಳಗೆ ಸಲ್ಲಿಸಿ. ನಿಮಗೆ ಯಾವುದೇ ತೊಂದರೆ ಆಗದಂತೆ ಚುನಾವಣೆ ನಡೆಸುವುದು ನನ್ನ ಜವಾಬ್ದಾರಿ. 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್‌ನಲ್ಲಿ ಉಪ ಚುನಾವಣೆ ನಡೆಯಲಿದ್ದು, ಬಳಿಕ ಬಿಜೆಪಿ ಸರ್ಕಾರ ಪತನವಾಗುತ್ತದೆ’ ಎಂದು ಹೇಳಿದರು.

ಸಾಮಾಜಿಕ ನ್ಯಾಯವಿಲ್ಲ: ‘ಶ್ರೀನಿವಾಸಗೌಡರು ಶಾಸಕರಾದ ದಿನದಿಂದ ಸಾಮಾಜಿಕ ನ್ಯಾಯ ಇಲ್ಲವಾಗಿದೆ. ಕ್ಷೇತ್ರದಲ್ಲಿ ಶಾಸಕರು ಇದ್ದೂ ಇಲ್ಲದಂತಾಗಿದೆ. ನಗರಸಭೆ ಚುನಾವಣೆಯನ್ನು ನಾವು ದಿಕ್ಸೂಚಿಯಾಗಿಸಿಕೊಂಡರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ಅವರನ್ನು ಗೆಲ್ಲಿಸಬಹುದು’ ಎಂದು ಪಕ್ಷದ ಸದಸ್ಯ ಸಾಬೀರ್‌ ಪಾಷಾ ಅಭಿಪ್ರಾಯಪಟ್ಟರು.

ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಇಮ್ರಾನ್, ಸತ್ಯನಾರಾಯಣ, ಕೃಷ್ಣಪ್ಪ, ನಗರಸಭೆ ಮಾಜಿ ಸದಸ್ಯರಾದ ಸೋಮಶೇಖರ್, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT