ಸೋಮವಾರ, ಅಕ್ಟೋಬರ್ 18, 2021
25 °C
ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

ಕೋಲಾರ ನಗರಸಭೆ ಚುನಾವಣೆ: ನಾಳೆ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ 3 ನಗರಸಭೆಗಳಿಗೆ ಮಂಗಳವಾರ (ನ.12) ನಡೆಯಲಿದ್ದು, ಜಿಲ್ಲಾಡಳಿತವು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿದೆ.

ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆ ವ್ಯಾಪ್ತಿಯ 101 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಮೂರೂ ನಗರಸಭೆಗಳಿಂದ ಅಂತಿಮವಾಗಿ 568 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಮತದಾರರು ಮಂಗಳವಾರ ಅಭ್ಯರ್ಥಿಗಳ ಸೋಲು ಗೆಲುವು ನಿರ್ಧರಿಸಲಿದ್ದಾರೆ.

ಮನೆ ಮನೆ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳು ಮತದಾರರ ಓಲೈಕೆಗೆ ಕಸರತ್ತು ಮುಂದುವರಿಸಿದ್ದು, ಹಣ, ಬೆಳ್ಳಿ ದೀಪ, ಕೈಗಡಿಯಾರ, ಚಿನ್ನದ ಮೂಗುತಿ, ಕುಕ್ಕರ್‌ ಸೇರಿದಂತೆ ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮೂರೂ ನಗರಸಭೆಗಳಿಂದ ಒಟ್ಟಾರೆ 276 ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಪೈಕಿ 129 ಸೂಕ್ಷ್ಮ , 73 ಅತಿ ಸೂಕ್ಷ್ಮ ಹಾಗೂ 74 ಸಾಮಾನ್ಯ ಮತಗಟ್ಟೆಗಳಾಗಿವೆ. ಮತದಾನಕ್ಕೆ 304 ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಲಾಗುತ್ತಿದೆ. 1,216 ಮಂದಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಶೇ 20ರಷ್ಟು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

ಪ್ರತಿ ಮತಗಟ್ಟೆಗೆ 3 ಮಂದಿ ಭದ್ರತಾ ಸಿಬ್ಬಂದಿ ಮತ್ತು 4 ಮಂದಿ ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದೆ. 9 ಸೆಕ್ಟರ್ ತಂಡಗಳ ಜತೆಗೆ 14 ಮಂದಿ ನೋಡಲ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಸಿಬ್ಬಂದಿಗೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕೆಲ ಮತಗಟ್ಟೆಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಗುತ್ತದೆ.

ಮತದಾರರೆಷ್ಟು?: ಮೂರೂ ನಗರಸಭೆಗಳಿಂದ ಒಟ್ಟಾರೆ 2,60,961 ಮತದಾರರಿದ್ದಾರೆ. ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ 52,652 ಮಂದಿ ಪುರುಷ, 53,369 ಮಂದಿ ಮಹಿಳೆಯರು ಹಾಗೂ 21 ಇತರೆ ಮತದಾರರು ಸೇರಿದಂತೆ 1,06,042 ಮತದಾರರಿದ್ದಾರೆ. ಮುಳಬಾಗಿಲು ನಗರಸಭೆ ವ್ಯಾಪ್ತಿಯಲ್ಲಿ 22,565 ಪುರುಷ, 22,690 ಮಹಿಳೆ ಮತ್ತು ಒಬ್ಬರು ಇತರೆ ಮತದಾರರು ಸೇರಿದಂತೆ 45,256 ಮತದಾರರಿದ್ದಾರೆ. ಕೆಜಿಎಫ್‌ ನಗರಸಭೆ ವ್ಯಾಪ್ತಿಯಲ್ಲಿ 54,487 ಪುರುಷ, 55,147 ಮಹಿಳೆ ಹಾಗೂ 29 ಮಂದಿ ಇತರೆ ಮತದಾರರು ಸೇರಿದಂತೆ 1,09,663 ಮತದಾರರಿದ್ದಾರೆ.

ನಿಷೇಧಾಜ್ಞೆ ಜಾರಿ: ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಚುನಾವಣೆ ನಡೆಯಲಿರುವ ನಗರಸಭೆಗಳ ವ್ಯಾಪ್ತಿಯಲ್ಲಿ ಸೋಮವಾರ (ನ.11) ಬೆಳಿಗ್ಗೆ 7 ಗಂಟೆಯಿಂದ ನ.12ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮುಳಬಾಗಿಲು, ಕೋಲಾರ ಮತ್ತು ಕೆಜಿಎಫ್ (ರಾಬರ್ಟ್‌ಸನ್‌ಪೇಟೆ) ನಗರಸಭೆ ಗಡಿಯಿಂದ 3 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಬಂದ್‌ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ಸಂತೆ ಮತ್ತು ಜಾತ್ರೆ ನಿಷೇಧಿಸಲಾಗಿದೆ.

ಮತಗಟ್ಟೆಗೆ ಸಿಬ್ಬಂದಿ: ಮತಗಟ್ಟೆ ಸಿಬ್ಬಂದಿಯು ಆಯಾ ನಗರಸಭೆಗಳ ವ್ಯಾಪ್ತಿಯ ಮಸ್ಟರಿಂಗ್‌ ಕೇಂದ್ರಗಳಲ್ಲಿ ಸೋಮವಾರ ಇವಿಎಂ ಪಡೆದು ಪೊಲೀಸ್‌ ಭದ್ರತೆಯಲ್ಲಿ ಮತಗಟ್ಟೆ ತಲುಪಿದ್ದಾರೆ. ಮತಗಟ್ಟೆ ಸಿಬ್ಬಂದಿಗೆ ಮಸ್ಟರಿಂಗ್‌ ಕೇಂದ್ರಗಳಲ್ಲಿ ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬರ್‌, ಪಲ್ಯ, ಪಾಯಸ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಮತಗಟ್ಟೆ ಅಧಿಕಾರಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಔಷಧಗಳು, ಓಆರ್‍ಎಸ್ ಪೊಟ್ಟಣ ಮತ್ತು ಆಯಕಟ್ಟಿನ ಜಾಗದಲ್ಲಿ ಆಂಬುಲೆನ್ಸ್‌ ಸೇವೆ ಕಲ್ಪಿಸಲಾಗಿದೆ.

ಪೊಲೀಸ್‌ ಕಟ್ಟೆಚ್ಚರ: ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಹಣ, ಮದ್ಯ ಹಾಗೂ ಉಡುಗೊರೆ ಹಂಚಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಚುನಾವಣಾ ಅಕ್ರಮಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.

740 ಪೊಲೀಸ್‌ ಸಿಬ್ಬಂದಿ, 398 ಮಂದಿ ಗೃಹರಕ್ಷಕ ದಳ ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) 7 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್‌) 5 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಸ್ತ್ರಾಸ್ತ್ರ ಸಾಗಣೆ, ಪ್ರದರ್ಶನ ಹಾಗೂ ಬಳಕೆ ನಿರ್ಬಂಧಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು, ಮಾದರಿ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಹಾಗೂ ಚುನಾವಣಾ ವೀಕ್ಷಕರು ನಿಯಮಿತವಾಗಿ ಗಸ್ತು ನಡೆಸಲಿದ್ದಾರೆ.

ಅಂಕಿ ಅಂಶ.....
* 101 ವಾರ್ಡ್‌ಗಳಿಗೆ ಚುನಾವಣೆ
* 568 ಅಭ್ಯರ್ಥಿಗಳು ಕಣದಲ್ಲಿದ್ದಾರೆ
* 276 ಮತಗಟ್ಟೆ ಸ್ಥಾಪನೆ
* 2,60,961 ಮಂದಿ ಮತದಾರರು
* 1,216 ಸಿಬ್ಬಂದಿ ನಿಯೋಜನೆ
* 304 ಇವಿಎಂ ಬಳಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.