ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ದರ್ಪ

ನಾಮನಿರ್ದೇಶಿತ ಸದಸ್ಯರ ಮೇಲೆ ಬಾಟಲಿ ಎಸೆತ: ನಿಂದನೆ
Last Updated 22 ಜೂನ್ 2021, 18:36 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ನಿಯಂತ್ರಣ ಸಂಬಂಧ ಇಲ್ಲಿನ ನಗರಸಭೆಯಲ್ಲಿ ಸೋಮವಾರ ಆಯೋಜನೆಯಾಗಿದ್ದ ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌ ಅವರು ಅಧಿಕಾರಿಗಳು ಹಾಗೂ ಅಧ್ಯಕ್ಷರ ಸಮ್ಮುಖದಲ್ಲೇ ನಾಮನಿರ್ದೇಶಿತ ಸದಸ್ಯ ರಾಜೇಶ್‌ ಮೇಲೆ ನೀರಿನ ಬಾಟಲಿ ಎಸೆದು ದರ್ಪ ತೋರಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ನಗರಸಭೆ ಅಧ್ಯಕ್ಷೆ ಶ್ವೇತಾ ಹಾಗೂ ಉಪ ವಿಭಾಗಾಧಿಕಾರಿ ಸೋಮಶೇಖರ್ ನೇತೃತ್ವದಲ್ಲಿ ನಗರಸಭೆ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾತನಾಡಿದ ನಾಮನಿರ್ದೇಶಿತ ಸದಸ್ಯ ರಾಜೇಶ್, ‘ಆರೋಗ್ಯ ಇಲಾಖೆ ಅಧಿಕಾರಿಗಳು, ವಾರ್ಡ್ ಸದಸ್ಯರು ಹಾಗೂ ಸಂಘ ಸಂಸ್ಥೆಗಳು ಒಗ್ಗೂಡಿ ಕೋವಿಡ್ ನಿಯಂತ್ರಣಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಇದಕ್ಕೆ ಸಿಡಿಮಿಡಿಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ‘ಸಭೆಯಲ್ಲಿ ಮಾತನಾಡಲು ನೀನು ಅರ್ಹನಲ್ಲ. ಮೊದಲು ಕುಳಿತುಕೋ’ ಎಂದು ಏರು ದನಿಯಲ್ಲಿ ಗದರಿದರು. ಇದರಿಂದ ಅಸಮಾಧಾನಗೊಂಡ ರಾಜೇಶ್, ‘ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕೋವಿಡ್‌ ಮಹಾಮಮಾರಿಯಿಂದ ಜನ ರೋಸಿ ಹೋಗಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಸೋಂಕು ನಿಯಂತ್ರಣಕ್ಕೆ ಕೆಲಸ ಮಾಡೋಣ’ ಎಂದರು.

ಆಗ ಮಂಜುನಾಥ್‌ ಏಕಾಏಕಿ ರಾಜೇಶ್‌ ಮೇಲೆ ನೀರಿನ ಬಾಟಲಿ ಎಸೆದು ಅವಾಚ್ಯ ಶಬ್ದಗಳಿಂದ ಮನಸೋಇಚ್ಛೆ ನಿಂದಿಸಿದರು. ‘ವಾರ್ಡ್‌ಗಳಲ್ಲಿ ಯಾವುದೇ ಕೆಲಸ ಮಾಡಬೇಕಾದರೆ ಅಥವಾ ಕಾರ್ಯಕ್ರಮ ನಡೆಸಬೇಕಾದರೆ ಮೊದಲು ಚುನಾಯಿತ ಸದಸ್ಯರ ಗಮನಕ್ಕೆ ತರಬೇಕು. ಸದಸ್ಯರು ಸೂಚಿಸಿದ ಸಮಯಕ್ಕೆ ಕಾರ್ಯಕ್ರಮ ನಡೆಸಬೇಕು. ಇದನ್ನು ಹೇಳಲು ನೀನು ಯಾರು. ತೆಪ್ಪಗೆ ಕುಳಿತುಕೋ’ ಎಂದು ತಾಕೀತು ಮಾಡಿದರು.

ಇದರಿಂದ ಪರಸ್ಪರರ ಮಧ್ಯೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಆಗ ಮಧ್ಯ ಪ್ರವೇಶಿಸಿದ ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಗೂ ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ ಅವರು ಇಬ್ಬರನ್ನೂ ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸಭೆಯಲ್ಲಿ ಗದ್ದಲ ನಡೆಯುತ್ತಿದ್ದರೂ ಅಧ್ಯಕ್ಷೆ ಶ್ವೇತಾ ಮೌನವಾಗಿದ್ದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ರಮ್ಯಾ ದೀಪಿಕಾ, ನಗರಸಭೆ ಆಯುಕ್ತ ಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT