ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬೆಂಬಲಿಗ ಅಭ್ಯರ್ಥಿಗಳಿಗೆ ಹಣ ನೀಡಿ ನೆರವಾದ ಮುನಿಯಪ್ಪರ ಕೈಬಿಡಲಾರೆ: ವರ್ತೂರು

ಗ್ರಾ.ಪಂ ಚುನಾವಣೆ: ಬೆಂಬಲಿಗರ ಗೆಲುವಿಗೆ ಕಾಂಗ್ರೆಸ್ ಹಣ
Last Updated 3 ಜನವರಿ 2021, 14:27 IST
ಅಕ್ಷರ ಗಾತ್ರ

ಕೋಲಾರ: ‘ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಗ್ರಾ.ಪಂ ಚುನಾವಣೆಯಲ್ಲಿ ನನ್ನ ಕಡೆಯ 347 ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಹಣಕಾಸು ನೆರವು ನೀಡುವ ಮೂಲಕ ಗೆಲುವಿಗೆ ಸಹಕರಿಸಿದ್ದಾರೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹೇಳಿದರು.

ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ತಮ್ಮ ಬೆಂಬಲಿಗ ಸದಸ್ಯರಿಗೆ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ನನ್ನ ಬಳಿ ಹಣವಿಲ್ಲವೆಂದು ತಿಳಿದಿರುವ ಮುನಿಯಪ್ಪ ಅವರು ಕಾಂಗ್ರೆಸ್‌ನ ಹಣವನ್ನು ನನ್ನ ಬೆಂಬಲಿಗ ಅಭ್ಯರ್ಥಿಗಳಿಗೆ ನೀಡುವ ಮೂಲಕ ಪಂಚಾಯಿತಿಯಲ್ಲಿ ಹೆಚ್ಚು ಸ್ಥಾನ ಗಳಿಸಲು ನೆರವು ನೀಡಿದ್ದಾರೆ’ ಎಂದರು.

‘ನಾನು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದಾಗ ಲೋಕಸಭಾ ಚುನಾವಣೆಯಲ್ಲಿ ಡಿ.ಎಸ್.ವೀರಯ್ಯ ಪರ ಕೆಲಸ ಮಾಡದೆ ಮುನಿಯಪ್ಪರ ಬೆನ್ನಿಗೆ ನಿಂತಿದ್ದರಿಂದ ಕಾಂಗ್ರೆಸ್‌ ಜಯಿಸಿತು. ಅದೇ ರೀತಿ ಮುನಿಯಪ್ಪ ಅವರು ಸಹ 3 ಚುನಾವಣೆಯಲ್ಲೂ ನನ್ನ ಕೈಬಿಟ್ಟಿಲ್ಲ. ಹೀಗಾಗಿ ನಾನೂ ಅವರ ಕೈಬಿಡಲ್ಲ. ಪಕ್ಕದಲ್ಲಿರುವವರ ಬಲವಂತಕ್ಕೆ ಮಣಿದು ಮುನಿಯಪ್ಪ ನನ್ನ ವಿರುದ್ಧ ಹೇಳಿಕೆ ನೀಡುತ್ತಾರೆ. ಅದನ್ನು ನಾನು ಗಂಭೀರವಾಗಿ ಪರಿಗಣಿಸಲ್ಲ’ ಎಂದು ತಿಳಿಸಿದರು.

‘ಕೋಲಾರ ತಾಲ್ಲೂಕಿನ 18 ಗ್ರಾ.ಪಂಗಳಲ್ಲಿ 15 ಕಡೆ ಬೆಂಬಲಿಗರು ಬಹುಮತ ಪಡೆದಿದ್ದಾರೆ. ಕ್ಯಾಲನೂರು, ನರಸಾಪುರ ಮತ್ತು ವಕ್ಕಲೇರಿ ಪಂಚಾಯಿತಿಯಲ್ಲಿ ಫಲಿತಾಂಶ ಅತಂತ್ರವಾಗಿದೆ. ಜೆಡಿಎಸ್‌ಗೆ ಕನಿಷ್ಠ ಒಂದು ಪಂಚಾಯಿತಿಯಲ್ಲೂ ಬಹುಮತ ಸಿಕ್ಕಿಲ್ಲ. ಶಾಸಕ ಶ್ರೀನಿವಾಸಗೌಡರಿಗೆ ಧೈರ್ಯವಿದ್ದರೆ ಬಹುಮತ ತೋರಿಸಲಿ’ ಎಂದು ಸವಾಲು ಹಾಕಿದರು.

‘ಶಾಸಕ ಶ್ರೀನಿವಾಸಗೌಡರ ದೌರ್ಜನ್ಯದಿಂದ ಬೇಸತ್ತಿರುವ ಕ್ಷೇತ್ರದ ಜನ ವರ್ತೂರು ಪ್ರಕಾಶ್ ಮೇಲು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಫಲವಾಗಿ ಗ್ರಾ.ಪಂ ಚುನಾವಣೆಯಲ್ಲಿ ನನ್ನ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದ್ದಾರೆ. ಸದ್ಯದಲ್ಲೇ ಕಾರ್ಯಕರ್ತರ ಸಮಾವೇಶ ನಡೆಸಿ ನನ್ನ ಶಕ್ತಿ ಪ್ರದರ್ಶನ ಮಾಡುತ್ತೇನೆ. ಕ್ಷೇತ್ರದಲ್ಲಿ 10 ಸಾವಿರ ಜನರನ್ನು ಸೇರಿಸುವ ಶಕ್ತಿಯಿದೆ’ ಎಂದರು.

ನಿದ್ದೆಗೆಡಿಸಿದೆ: ‘ವರ್ತೂರು ಪ್ರಕಾಶ್ ಶಾಸಕರಾಗಿದ್ದಾಗ ಗ್ರಾ.ಪಂಗಳಲ್ಲಿ ಸಿಕ್ಕಿದ ಸ್ಥಾನಗಳಿಗಿಂತ ಈಗ ಹೆಚ್ಚು ಸ್ಥಾನಗಳಲ್ಲಿ ಬೆಂಬಲಿಗರು ಗೆದ್ದಿದ್ದಾರೆ. ಜತೆಗೆ ಪ್ರತಿ ಕ್ಷೇತ್ರದಲ್ಲೂ ಬೆಂಬಲಿಗ ಸದಸ್ಯರು ಗಳಿಸಿರುವ ಮತಗಳ ಪ್ರಮಾಣ ಏರಿಕೆಯಾಗಿದೆ. ಇದು ರಾಜಕೀಯ ವಿರೋಧಿಗಳ ನಿದ್ದೆಗೆಡಿಸಿದೆ’ ಎಂದು ವರ್ತೂರು ಪ್ರಕಾಶ್‌ರ ಬೆಂಬಲಿಗ ಮಂಜುನಾಥ್ ಹೇಳಿದರು.

‘ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವರ್ತೂರು ಪ್ರಕಾಶ್‌ ಅವರು ಗೆಲ್ಲುವ ಮೂಲಕ ಎದುರಾಳಿಗಳಿಗೆ ಮತ್ತೊಂದು ಶಾಕ್ ನೀಡುತ್ತಾರೆ. ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುವ ಮೂಲಕ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್, ಸದಸ್ಯೆ ರೂಪಶ್ರೀ, ಮುಖಂಡ ಬೆಗ್ಲಿ ಪ್ರಕಾಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT