ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌ ಸೇರಲು ಮುನಿಯಪ್ಪ ಅಡ್ಡಗಾಲು’

ಅಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್‌ ತೀವ್ರ ವಾಗ್ದಾಳಿ
Last Updated 23 ಫೆಬ್ರುವರಿ 2021, 14:21 IST
ಅಕ್ಷರ ಗಾತ್ರ

ಕೋಲಾರ: ‘ನಾನು ಕಾಂಗ್ರೆಸ್‌ಗೆ ಸೇರ್ಪಡೆಯಾದರೆ ಕೆ.ಎಚ್.ಮುನಿಯಪ್ಪರ ವ್ಯಾಪಾರ ನಿಲ್ಲುತ್ತದೆ. ಅದಕ್ಕೆ ಅವರು ಕಾಂಗ್ರೆಸ್‌ ಸೇರದಂತೆ ನನಗೆ ಅಡ್ಡಗಾಲು ಹಾಕುತ್ತಿದ್ದಾರೆ. ಮುಸ್ಲಿಮರು ಕುರಿ ಕಡಿಯುವಾಗ ಬಾಯಿಗೆ ನೀರು ಬಿಡುತ್ತಾರೆ. ಆದರೆ, ಮುನಿಯಪ್ಪ ನೀರು ಹಾಕದೆಯೇ ಕಡಿಯುವ ಕಟುಕ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ತೀವ್ರ ವಾಗ್ದಾಳಿ ನಡೆಸಿದರು.

ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 12 ಗ್ರಾ.ಪಂಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬೆಂಬಲಿಗ ಸದಸ್ಯರಿಗೆ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ನಾನು ಕಾಂಗ್ರೆಸ್ ಸೇರುವುದಕ್ಕೆ ಸಿದ್ದರಾಮಯ್ಯ ಅಥವಾ ರಮೇಶ್‌ಕುಮಾರ್‌ ಅಡ್ಡಿಪಡಿಸುತ್ತಿಲ್ಲ. ಬದಲಿಗೆ ಮುನಿಯಪ್ಪರೇ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಲೋಕಸಭೆ ಚುನಾವಣೆಯಲ್ಲಿ 3 ಬಾರಿ ಮುನಿಯಪ್ಪರ ಗೆಲುವಿಗೆ ಶ್ರಮಿಸಿದ್ದರೂ ಅವರಿಗೆ ನಿಯತ್ತಿಲ್ಲ. ನಾನು ಸದ್ಯ ಶಾಸಕನಾಗಿಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಜಿ.ಪಂ ಮತ್ತು ತಾ.ಪಂ ಚುನಾವಣೆ ನಡೆಯುತ್ತದೆ. ನನಗೂ ಸ್ವಾಭಿಮಾನವಿದೆ. ‘ನಮ್ಮ ಕಾಂಗ್ರೆಸ್’ ಪಕ್ಷದಿಂದಲೇ ಹೊಲಿಗೆ ಯಂತ್ರದ ಗುರುತಿನಲ್ಲಿ ಜಿ.ಪಂ ಮತ್ತು ತಾ.ಪಂ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸೋಣ’ ಎಂದರು.

‘ಕಾಂಗ್ರೆಸ್‌ಗೆ ಸೇರಲು ಅರ್ಜಿ ಹಾಕಿಲ್ಲ. ಅದರ ಅಗತ್ಯವೂ ನನಗಿಲ್ಲ. ಕ್ಷೇತ್ರದಲ್ಲಿ ಗೆದ್ದು ಶಾಸಕನಾದ ನಂತರವೇ ಕಾಂಗ್ರೆಸ್‌ಗೆ ಹೋಗುತ್ತೇನೆ. ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಕನಿಷ್ಠ 10 ಸಾವಿರ ಮತಗಳು ಜೆಡಿಎಸ್‌ ಪಾಲಾಗುತ್ತವೆ. ನಾನು ಕಾಂಗ್ರೆಸ್‌ ಸೇರಿದರೆ ಅಪಾಯವೇ ಹೆಚ್ಚು. ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದರೆ ಮರ್ಯಾದೆ ಜಾಸ್ತಿ. ಕಾಂಗ್ರೆಸ್‌ನವರು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರಿಗೆ ರತ್ನಗಂಬಳಿ ಹಾಕಿ ಪಕ್ಷಕ್ಕೆ ಕರೆಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಜಿಲ್ಲೆಯ ಮಾಲೂರು, ಬಂಗಾರಪೇಟೆ, ಕೆಜಿಎಫ್‌, ಶ್ರೀನಿವಾಸಪುರ ಕ್ಷೇತ್ರ ಹೊರತುಪಡಿಸಿ ಬೇರೆಲ್ಲೂ ಕಾಂಗ್ರೆಸ್‌ನವರು ಗೆದ್ದಿಲ್ಲ. ಕೋಲಾರ, ಮುಳಬಾಗಿಲು, ಚಿಂತಾಮಣಿಯಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ಶ್ರೀನಿವಾಸಗೌಡರಂತೆ ಕಾಂಗ್ರೆಸ್‌ ಮುಖಂಡರಿಗೂ ಬುದ್ಧಿಭ್ರಮಣೆ ಆಗಿದೆ’ ಎಂದು ವ್ಯಂಗ್ಯವಾಡಿದರು.

ಸುಳ್ಳು ಹೇಳುತ್ತಿದ್ದಾರೆ: ‘ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 15 ಗ್ರಾ.ಪಂಗಳು ನಮ್ಮ ವಶವಾಗಬೇಕಿತ್ತು. ಕಾರಣಾಂತರದಿಂದ 3 ಗ್ರಾ.ಪಂಗಳಲ್ಲಿ ಜೆಡಿಎಸ್‌ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ. ಆದರೂ ಶಾಸಕ ಶ್ರೀನಿವಾಸಗೌಡರು ಮತ್ತು ಜೆಡಿಎಸ್‌ ಮುಖಂಡರು 12 ಗ್ರಾ.ಪಂಗಳಲ್ಲಿ ತಮ್ಮ ಪಕ್ಷದ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಆರೋಪಿಸಿದರು.

‘ಜಿ.ಪಂ ಚುನಾವಣೆಗೆ ಬಿ ಫಾರಂ ನಮ್ಮ ಕೈಗೆ ಕೊಟ್ಟರೆ ಕಾಂಗ್ರೆಸ್‌ಗೆ ಮರ್ಯಾದೆ ಇರುತ್ತದೆ. ನಾವು ಗೆದ್ದರೆ ಅವರೇ ಗೆದ್ದಂತೆ. ಇಲ್ಲದಿದ್ದರೆ ಕಾಂಗ್ರೆಸ್‌ನ ಸ್ಥಿತಿ ಅಧೋಗತಿ. ಮುನಿಯಪ್ಪ ಅವರು ಹುಚ್ಚರ ಮಾತು ಕೇಳಿ ಲಘುವಾಗಿ ಮಾತನಾಡಬಾರದು’ ಎಂದು ಕುಟುಕಿದರು.

ವರ್ತೂರು ಗೆಲ್ಲುತ್ತಾರೆ: ‘ಕಾಂಗ್ರೆಸ್‌ನವರು ನಮ್ಮ ಒಂದು ಕಣ್ಣು ಕೀಳಲು ನೋಡಿದರೆ ಅವರ ಎರಡು ಕಣ್ಣು ಹೋಗುತ್ತವೆ. ಎಲ್ಲಾ ಜಾತಿ ಜನಾಂಗಗಳು ನಮ್ಮೊಂದಿಗೆ ಇವೆ. ಎಲ್ಲಾ ಗ್ರಾಮಸ್ಥರಿಗೂ ಮನವರಿಕೆ ಆಗಿದ್ದು, ವರ್ತೂರು ಪ್ರಕಾಶ್‌ರನ್ನು ಮತ್ತೆ ಶಾಸಕರಾಗಿ ಮಾಡಲು ಕಾಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ವರ್ತೂರು ಪ್ರಕಾಶ್‌ 40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಸಿರು ಶಾಲು ಬೇರೆ ಹಾಕಿಕೊಂಡಿರುವ ಕಾಂಗ್ರೆಸ್‌ ಮುಖಂಡ ಊರಬಾಗಿಲು ಶ್ರೀನಿವಾಸ್‌ ಕಥೆ ಮೂರು ಬಾಗಿಲು ಆಗಿದೆ. ಕೋಲಾರದಲ್ಲಿ ಸಾಕಷ್ಟು ನಿವೇಶನ, ಜಮೀನು ನುಂಗಿರುವ ಶ್ರೀನಿವಾಸ್‌ಗೆ ನಗರಸಭೆ ಚುನಾವಣೆಯಲ್ಲಿ ಕನಿಷ್ಠ ಠೇವಣಿ ಬರಲಿಲ್ಲ. ಅವರಿಗೆ ವಿಧಾನಸಭಾ ಚುನಾವಣಾ ಟಿಕೆಟ್‌ ಕೊಡಿಸಲು ಮುನಿಯಪ್ಪ, ಡಿ.ಕೆ.ಶಿವಕುಮಾರ್‌ರ ಮನೆಗೆ ಕರೆದುಕೊಂಡು ಹೋಗಿದ್ದರು’ ಎಂದು ಲೇವಡಿ ಮಾಡಿದರು.

ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್.ಅರುಣ್‌ಪ್ರಸಾದ್, ಸದಸ್ಯರಾದ ರೂಪಶ್ರೀ, ಉಷಾ, ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT