ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.3ಕ್ಕೆ ಜನ್ಮ ಶತಮಾನೋತ್ಸವ ಆಚರಣೆ

ಎಂ.ವಿ.ಕೃಷ್ಣಪ್ಪರ ಜನ್ಮ ಶತಮಾನೋತ್ಸವ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
Last Updated 20 ಜನವರಿ 2019, 11:44 IST
ಅಕ್ಷರ ಗಾತ್ರ

ಕೋಲಾರ: ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪರ ಜನ್ಮ ಶತಮಾನೋತ್ಸವವನ್ನು ಫೆ.3ರಂದು ನಗರ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲು ಇಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್, ‘ಶತಮಾನೋತ್ಸವ ಆಚರಣೆ ಕುರಿತು ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಇದು ಒಬ್ಬ ವ್ಯಕ್ತಿ, ಪಕ್ಷ ಮಾಡುತ್ತಿರುವುದಲ್ಲ. ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಕೋರಿದರು.

‘ಕೃಷ್ಣಪ್ಪ ಅವರು ಹೈನೋದ್ಯಮ ಕ್ಷೇತ್ರಕ್ಕಷ್ಟೇ ಸೀಮಿತವಾಗಲಿಲ್ಲ. ಅವರು ಕೃಷಿಗೂ ಆದ್ಯತೆ ನೀಡಿದರು. ಜತೆಗೆ ಜಿಲ್ಲೆಯ ಕೆಜಿಎಫ್‌ ಚಿನ್ನದ ಗಣಿಯನ್ನು ಶಾಶ್ವತವಾಗಿ ಉಳಿಸಲು ಪ್ರಯತ್ನಿಸಿದರು. ಈಗ ಅದರ ಪರಿಸ್ಥಿತಿ ನೆನೆದರೆ ಬೇಸರವಾಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಹೈನೋದ್ಯಮ ಸ್ಥಾಪನೆ ಮಾಡಿಕೊಟ್ಟಿದ್ದಾರೆ. ಅದನ್ನು ಮತ್ತಷ್ಟು ಎತ್ತರಕ್ಕೆ ಅಭಿವೃದ್ಧಿಪಡಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯವರೆ ಅದ ಮೊದಲ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ, ಟಿ.ಚನ್ನಯ್ಯ ಹಾಗೂ ಎಂ.ವಿ.ಕೃಷ್ಣಪ್ಪ ಅವರ ಕಂಚಿನ ಪ್ರತಿಮೆಯನ್ನು ನಗರದಲ್ಲಿ ನಿರ್ಮಾಣ ಮಾಡಬೇಕು. ಇದಕ್ಕೆ ಅಗತ್ಯ ಜಾಗವನ್ನು ನಗರಸಭೆ ಗುರುತಿಸಿಕೊಡಬೇಕು. ಜತೆಗೆ ಬೇಕಾದಂತಹ ನೆರವನ್ನು ನೀಡುವವರು ಇದ್ದಾರೆ’ ಎಂದು ಹೇಳಿದರು.

‘ಶತಮಾನೋತ್ಸವದ ಅಂಗವಾಗಿ ಕೃಷ್ಣಪ್ಪ ನೆನಪಿನಲ್ಲಿ ಶಾಶ್ವತ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ. ಅವರ ಸ್ವಗ್ರಾಮ ಗುಟ್ಟಹಳ್ಳಿಯಲ್ಲಿ ಡಿಪ್ಲೋಮೊ ಕಾಲೇಜು ಸ್ಥಾಪನೆಗೆ ಸರ್ಕಾರದಿಂದ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ಶ್ರೀನಿವಾಸಗೌಡರು ವಹಿಸುತ್ತಾರೆ. ಅತಿಥಿಗಳಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಮುಖ್ಯ ಮಂತ್ರಿಗಳಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಎರಡೂ ಜಿಲ್ಲೆಯ ಜನಪ್ರತಿನಿಧಿಗಳನ್ನು ಆಹ್ವಾನ ನೀಡಲಾಗುವುದು. ಇದರಲ್ಲಿ ಯಾವುದೇ ಪಕ್ಷಪಾತ ಬೇಡ’ ಎಂದು ಹೇಳಿದರು.

‘ಎಂ.ವಿ. ಕೃಷ್ಣಪ್ಪ ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಇದರಿಂದ ಅವರ ಹೆಸರು ದೇಶದಲ್ಲಿ ಶಾಶ್ವತವಾಗಿ ಉಳಿಸಲು ಸಾಧ್ಯ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಅಭಿಪ್ರಾಯಪಟ್ಟರು.
‘ಎರಡೂ ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕಾರದ ಮಳ್ಳೂರು ಪಾಪಣ್ಣ, ಅನಂದ್ ಬೈರಾರೆಡ್ಡಿ, ನಾರಾಯಣಗೌಡ ಹಾಗೂ ರೈತರಿಗಾಗಿ ಶ್ರಮಿಸಿದ ಸಾಧಕರನ್ನು ನೆನಪಿನಲ್ಲಿ ಪುಸ್ತಕ ರಚನೆ ಮಾಡಿ ಸಮಾಜಕ್ಕೆ ನೀಡುವ ಮೂಲಕ ಸಾಧನೆಗಳ ಬಗ್ಗೆ ಪರಿಚಯಿಸಲಾಗುವುದು. ಕೃಷ್ಣಪ್ಪ ಅವರ ಕುಟುಂಬಸ್ಥರನ್ನು ಗೌರವಿಸಲಾಗುವುದು. 25 ಸಾವಿರಕ್ಕೂ ಹೆಚ್ಚು ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ‘ಎಂ.ವಿ.ಕೃಷ್ಣಪ್ಪ ಅವರ ಸ್ಮಾರಣಾರ್ಥವಾಗಿ ₨ 160 ಕೋಟಿ ಗೋಲ್ಡನ್ ಡೈರಿ ಸ್ಥಾಪಿಸಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ₨ 5 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ಎರಡು ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಗೂ ಎಲ್ಲಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ವಿಧಾನ ಪರಿಷತ್ ಸದಸ್ಯ ನಸೀರ್ ಆಹಮ್ಮದ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್ ಕುಮಾರ್, ಸೊಣ್ಣೇಗೌಡ, ಕೋಚಿಮುಲ್ ನಿರ್ದೇಶಕ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT