ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಿ

ನಂದವರೀಕ ಟ್ರಸ್ಟ್‌ನ 11ನೇ ವಾರ್ಷಿಕೋತ್ಸವ ಸಮಾರಂಭ
Last Updated 20 ಜನವರಿ 2019, 13:31 IST
ಅಕ್ಷರ ಗಾತ್ರ

ಕೋಲಾರ: ‘ಸಮುದಾಯದ ಟ್ರಸ್ಟ್‌ಗಳು ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ಮಾಜಿ ಶಾಸಕ ಶ್ರೀನಿವಾಸಯ್ಯ ಸಲಹೆ ನೀಡಿದರು.

ಜಿಲ್ಲಾ ನಂದವರೀಕ ಟ್ರಸ್ಟ್‌ನಿಂದ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟ್ರಸ್ಟ್‌ನ 11ನೇ ವಾರ್ಷಿಕೋತ್ಸವ ಅಂಗವಾಗಿ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ‘ಒಳ್ಳೆಯ ಕೆಲಸ ಮಾಡುವ ಮನೋಭಾವ ಪ್ರತಿಯೊಬ್ಬರೂ ಮೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಸಮಾಜದಲ್ಲಿ ಒಳ್ಳೆಯ ಕೆಲಸಗಳು ದಿನೇ ದಿನೇ ಕಡಿಮೆಯಾಗುತ್ತಿರುವುದು ವಿಷಾಧನೀಯವಾಗಿದ್ದು, ಅದಕ್ಕೆ ಅವಕಾಶ ನೀಡಬಾರದು. ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಒಳ್ಳೆಯ ಸಾಮಾಜಿಕ ಕಾರ್ಯ ಮಾಡಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ನಂದವರೀಕ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದರೂ ಬುದ್ಧಿವಂತರು, ಪ್ರತಿಭಾವಂತರನ್ನು ಒಳಗೊಂಡಿದೆ. ಸರ್ವೇ ನಡೆಸುವ ಮೂಲಕ ಸರ್ಕಾರ ಯೋಜನೆಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ನಂದವರೀಕ ಮಹಾಸಭಾದ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್ ಒತ್ತಾಯಿಸಿದರು.

‘ಸಮುದಾಯದವರು ಮೊದಲು ಸಂಘಟಿತರಾಗಿ, ಎಲ್ಲರೂ ಭಾಗವಹಿಸಿದರೆ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಸಾಧ್ಯ. ₨ 1 ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.

‘ಮಣಿಗಾನಹಳ್ಳಿ ನಾಗಭೂಷಣ್ ರಾವ್ ಭವನ ನಿರ್ಮಾಣಕ್ಕೆ ಜಮೀನು ನೀಡಿದ್ದು, ಕಾಮಗಾರಿ ಪ್ರಗತಿಯಲಿದೆ. ಇದಕ್ಕೆ ಹಣಕಾಸಿನ ಕೊರತೆಯಿರುವುದರಿಂದ ದಾನಿಗಳು ನೆರವು ನೀಡಬೇಕು’ ಎಂದು ಕೋರಿದರು.

ಜಿಲ್ಲಾ ನಂದವರೀಕ ಟ್ರಸ್ಟ್‌ನ ಉಪಾಧ್ಯಕ್ಷ ಡಿ.ಎಸ್.ಶಂಕರ್ ಮಾತನಾಡಿ, ‘ಆರಂಭದಿಂದಲೂ ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.

‘ಇತ್ತೀಚೆಗೆ ಬಂಗಾರಪೇಟೆಯಲ್ಲಿ ಸಮಿತಿ ರಚನೆಯಾಗಿದ್ದು, ಇತರೆ ತಾಲ್ಲೂಕುಗಳಲ್ಲೂ ಸಮಿತಿಯನ್ನು ರಚಿಸಲು ಕ್ರಮಕೈಗೊಳ್ಳಲಾಗುವುದು. ನಾವು ಮಾಡುವ ಯಾವುದೇ ಒಳ್ಳೆಯ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಡಬೇಕು. ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲು ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಕೋರಿದರು.

ಟ್ರಸ್ಟ್‌ನ ಸದಸ್ಯ ವಾಸುದೇವ್ ವರದಿ ವಾಚಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಮಲಮ್ಮರಾಜು ರಚಿಸಿರುವ ಭಗವದ್ಗೀತಾ ಮಹಿಮೆ ಲೇಖನಗಳ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಟ್ರಸ್ಟ್‌ನ ಅಧ್ಯಕ್ಷ ಜಯರಾಮ್, ನಂದವರೀಕ ಮಹಾಸಭಾದ ಕಾರ್ಯದರ್ಶಿ ಭಾನುಮೂರ್ತಿ, ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕಿಟ್ಟಪ್ಪ, ಸದಸ್ಯರಾದ ಚಂಚುರಾಜ್, ಕೆ.ಆರ್.ಜಯಶ್ರೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT