ಮುಳಬಾಗಿಲು: ನಂಗಲಿ ಸಮೀಪದ ಐತಿಹಾಸಿಕ ಬಾವಿ ಅಳವಂಚಿಗೆ ತಲುಪಿದೆ. ಮೈಸೂರು ಸಂಸ್ಥಾನದ ರಾಜ ಜಯಚಾಮರಾಜೇಂದ್ರ ಒಡೆಯರ್ ಮೈಸೂರು ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿದ್ದ ಗಡಿಯಲ್ಲಿ ವಿಶಿಷ್ಟವಾದ ಹೆಗ್ಗುರುತುಗಾಗಿ ಬಾವಿ ನಿರ್ಮಿಸಿದ್ದರು.
ರಾಜ್ಯದಿಂದ ಆಂಧ್ರಪ್ರದೇಶದ ತಿರುಪತಿಗೆ ಹೋಗಿ ಬರುವ ಪ್ರಯಾಣಿಕರಿಗೆ ನೀರು ದಾಹ ನೀಗಿಸಲು ಬಾವಿ ತೋಡಿಸಿದ್ದರು. ಹೆದ್ದಾರಿ ವಿಸ್ತರಣೆ ಹಾಗೂ ಹೆದ್ದಾರಿ ಇಕ್ಕೆಲಗಳಲ್ಲಿ ಜನಜಂಗುಳಿ ಬೆಳೆದು ಅಂಗಡಿ ಮುಂಗಟ್ಟು ಹೆಚ್ಚಾಗಿ ಬಾವಿ ಪಾಳು ಬಿದ್ದಿದೆ. ಸುತ್ತಲೂ ಎತ್ತರವಾದ ಗಿಡ ಬೆಳೆದು ವಿನಾಶದ ಅಂಚಿಗೆ ತಲುಪಿದೆ.
ರಾಜ್ಯದ ಗಡಿ ಸೂಚಿಸಲೆಂದು ಮೈಸೂರು ಅರಸರು 1941ರಲ್ಲಿ ಸುಸಜ್ಜಿತವಾದ ಗಂಡ ಭೇರುಂಡ ಪಕ್ಷಿಗಳ ಕೆತ್ತನೆ ಹೊಂದಿದ್ದ ಕಲ್ಲಿನ ಸ್ತಂಭಗಳ ಪ್ರವೇಶ ದ್ವಾರ ಕೂಡ ನಿರ್ಮಿಸಿದ್ದರು. ಆದರೆ, ಇತಿಹಾಸ ಹಾಗೂ ಪ್ರಾಚೀನ ಆಸ್ತಿ ಉಳಿಸಿಕೊಳ್ಳಲು ಆಗದೆ ಗಂಡ ಭೇರುಂಡ ಕೆತ್ತನೆಯಾಗಲಿ ಅಥವಾ ಪ್ರವೇಶ ದ್ವಾರದ ಕಲ್ಲುಗಳಾಗಲಿ ಒಂದೂ ಇಲ್ಲದೆ ನಾಶವಾಗಿದೆ.
ನಂಗಲಿಯನ್ನು ಗಂಗರು ಹೊಯ್ಸಳರು ವಿಜಯನಗರ ಅರಸರು ಟಿಪ್ಪುಸುಲ್ತಾನ್ ಹೈದರಾಲಿ ಮೈಸೂರು ಅರಸರು ಆಳ್ವಿಕೆ ಮಾಡಿದ್ದರು ಎನ್ನುವುದಕ್ಕೆ ಅನೇಕ ಕುರುಹುಗಳಿವೆ. ದಾರಿ ಹೋಕರಿಗೆ ನೀರು ಕುಡಿಯಲು ಈ ಬಾವಿ ನಿರ್ಮಿಸಿದ್ದಾರೆಂದು ತಿಳಿದು ಬಂದಿದೆ. ಬಾವಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ.ಡಾ.ಜಿ.ಶಿವಪ್ಪ, ಅರಿವು ಇತಿಹಾಸ ತಜ್ಞ
ಸುಣ್ಣದ ಕಲ್ಲಿನಿಂದ ಸುಸಜ್ಜಿತವಾಗಿ ನಿರ್ಮಿಸಿರುವ ಏಳು ಮಟ್ಟಿಲಿನ ಬಾವಿ ಇದಾಗಿದೆ. ಹತ್ತು ವರ್ಷಗಳ ಹಿಂದೆ ರಸ್ತೆ ವಿಸ್ತರಿಸುವ ಸಮಯದಲ್ಲಿ ಪ್ರವೇಶ ದ್ವಾರ ಹಾಗೂ ಗಂಡ ಭೇರುಂಡ ಪಕ್ಷಿಗಳ ಕೆತ್ತನೆ ಕಿತ್ತು ಹಾಕಲಾಗಿದ್ದು ಕಲ್ಲುಗಳು ಮಾಯವಾಗಿವೆ.
ಸ್ಥಳೀಯ ಇತಿಹಾಸ ಉಳಿಸಲು ಯುವಕರು ಮುಂದಾಗಬೇಕು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ನರೇಗಾ ಅಥವಾ ಇನ್ನಿತರ ಯೋಜನೆಗಳಲ್ಲಿ ಮೈಸೂರು ಅರಸರಿಂದ ನಿರ್ಮಿಸಲಾಗಿರುವ ಬಾವಿಗೆ ರಕ್ಷಣಾ ಬೇಲಿ ಅಥವಾ ಕೋಟೆ ನಿರ್ಮಿಸಿ ಸ್ಮಾರಕವಾಗಿ ಪರಿವರ್ತಿಸಬೇಕಾಗಿದೆ.ಡಾ.ಜಿ.ಮುನಿವೆಂಕಟಪ್ಪ, ಇತಿಹಾಸ ತಜ್ಞ
ಆದರೆ, ಬಾವಿ ಮಾತ್ರ ಸುಸಜ್ಜಿತವಾಗಿ ಇದೆಯಾದರೂ ಬಾವಿಗೆ ಯಾವುದೇ ರಕ್ಷಣೆ ಇಲ್ಲದ ಕಾರಣ ಸುತ್ತಮುತ್ತಲಿನ ಜನ ಮತ್ತು ಅಂಗಡಿಗಳವರು ಬಾವಿಯಲ್ಲಿ ಕಸಕಡ್ಡಿ ಹಾಗೂ ಇನ್ನಿತರ ತ್ಯಾಜ್ಯ ಸುರಿದು ಬಾವಿ ಮುಚ್ಚಿ ಹೋಗಲು ಕಾರಣರಾಗುತ್ತಿದ್ದಾರೆ. ಬಾವಿ ಸುತ್ತಲೂ ನಾನಾ ವಿಧವಾದ ಗಿಡಗಂಟಿ ಬೆಳೆದಿದೆ. ಐತಿಹಾಸಿಕ ಸ್ಮಾರಕವಾಗಬೇಕಾಗಿದ್ದ ಬಾವಿ ಜನರಿಂದ ಕಣ್ಮರೆ ಆಗುತ್ತಿದೆ.
ಬಾವಿಗೆ ಬೇಕಾಗಿದೆ ರಕ್ಷಣೆ
ಕಸಕಡ್ಡಿ ಹೊರತೆಗೆದರೆ ಬಾವಿಯಲ್ಲಿ ನೀರು ಊಟೆಯಾಗಿ ಬಾವಿ ತುಂಬಲಿದೆ. ಅಕಸ್ಮಾತ್ ಬಾವಿ ನೀರು ಸುತ್ತಮುತ್ತಲಿನ ಜನರಿಗೆ ಬೇಡವಾದರೂ ಐತಿಹಾಸಿಕ ಬಾವಿಗೆ ಪುರಾತತ್ವ ಇಲಾಖೆ ಅಥವಾ ಪ್ರಾಚ್ಯವಸ್ತು ಇಲಾಖೆ ಬಾವಿ ಸುತ್ತಲೂ ಕಬ್ಬಿಣದ ತಗಡುಗಳ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿದರೆ ಸ್ಥಳೀಯ ಇತಿಹಾಸ ತಿಳಿಯಲು ಬಾವಿ ಉಳಿಸಿಕೊಳ್ಳಬಹುದಾಗಿದೆ.
ಇನ್ನು ಬಾವಿ ಸುತ್ತಲೂ ಕಲ್ಲಿನ ಕಾಂಪೌಂಡ್ ಅಥವಾ ಬೇಲಿ ಹಾಕಿ ಕಲ್ಲುಗಳ ಮೇಲೆ ಬಾವಿ ಹಾಗೂ ಜಾಗದ ಇತಿಹಾಸ ತಿಳಿಸುವ ಬಿತ್ತಿ ಚಿತ್ರ ಅಂಟಿಸಿದರೆ ವಿದ್ಯಾರ್ಥಿಗಳಿಗೆ ಜಯಚಾಮರಾಜೇಂದ್ರ ಒಡೆಯರ್ ಅವರ ಆಳ್ವಿಕೆ ನೆನಪು ತಿಳಿಸಿದಂತಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಬಾವಿಗೆ ರಕ್ಷಣೆ ನೀಡಬೇಕಾಗಿದೆ ಎಂಬುವುದು ಸ್ಥಳೀಯರ ಒತ್ತಾಯವಾಗಿದೆ.
ಇನ್ನು ಪಕ್ಕದಲ್ಲಿಯೇ ಸುಮಾರು ನೂರಾರು ವರ್ಷಗಳ ಕಾಲದ ಶಿವನ ಲಿಂಗವಿದೆ. ಶಿವನ ಲಿಂಗವನ್ನು ಸ್ಥಳೀಯರು ಒಂದು ಕಲ್ಲು ಚಪ್ಪಡಿ, ಸಣ್ಣ ಕೋಣೆಯಲ್ಲಿ ಇಟ್ಟಿದ್ದಾರೆ. ಶಿವಲಿಂಗ ಕೂಡ ಬಾವಿ ಬಳಿಯೇ ಪ್ರತಿಷ್ಠಾಪನೆ ಮಾಡಿದರೆ ದೈವ ಭಕ್ತಿಯಿಂದ ಬಾವಿ ಸುತ್ತಲೂ ಕಸ ಕಡ್ಡಿ ಹಾಕುವುದನ್ನು ತಪ್ಪಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.