ಶನಿವಾರ, ಅಕ್ಟೋಬರ್ 19, 2019
28 °C
ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾಧಿಕಾರಿ ಮಂಜುನಾಥ್‌ ಭರವಸೆ

ವರ್ಷದಲ್ಲಿ ನವೋದಯ ವಿದ್ಯಾಲಯ ಕಟ್ಟಡ ಪೂರ್ಣ

Published:
Updated:
Prajavani

ಕೋಲಾರ: ‘ದೇಶದಲ್ಲಿ 661 ಜವಾಹರ್ ನವೋದಯ ವಿದ್ಯಾಲಯಗಳಿವೆ. ಈ ಪೈಕಿ ಕೋಲಾರದ ಜವಾಹರ್ ನವೋದಯ ವಿದ್ಯಾಲಯ ಸೇರಿದ್ದು, ದೇಶವೇ ಗುರುತಿಸುವಂತೆ ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

ತಾಲ್ಲೂಕಿನ ವಕ್ಕಲೇರಿ ಬಳಿಯ ಗಂಗಾಪುರ ಗೇಟ್‌ನಲ್ಲಿ ಶುಕ್ರವಾರ ಜವಾಹರ್‌ ನವೋದಯ ವಿದ್ಯಾಲಯದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ‘ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಹೆಜ್ಜೆ ಇಟ್ಟಿದೆ’ ಎಂದು ತಿಳಿಸಿದರು.

‘ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಫೋಕ್ರಿಯಾಲ ನಿಶಾಂತ್ ಅವರು ದೇಶದ ವಿವಿಧೆಡೆ 6 ನವೋದಯ ವಿದ್ಯಾಲಯ ಕಟ್ಟಡ ಮತ್ತು 9 ವಿದ್ಯಾಲಯಗಳ ಕಾಮಗಾರಿಗೆ ವಿಡಿಯೋ ಸಂವಾದದ ಮೂಲಕ ಚಾಲನೆ ನೀಡಿದ್ದಾರೆ. ಇದು ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರ ಸಂಕೇತ’ ಎಂದು ಅಭಿಪ್ರಾಯಪಟ್ಟರು.

‘ಕೋಲಾರದ ನವೋದಯ ವಿದ್ಯಾಲಯವು ತಾತ್ಕಾಲಿಕವಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಯಟ್) ನಡೆಯುತ್ತಿದೆ. ವಿದ್ಯಾಲಯದಲ್ಲಿ ಸದ್ಯ 158 ವಿದ್ಯಾರ್ಥಿಗಳಿದ್ದಾರೆ. ಪ್ರತಿ ವರ್ಷ 40 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 80 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಮತ್ತು ಮೈದಾನಕ್ಕೆ 30 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಒಂದು ವರ್ಷದೊಳಗೆ ಕಟ್ಟಡ ನಿರ್ಮಿಸಿ ತರಗತಿ ಆರಂಭಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಶಿಕ್ಷಣಕ್ಕೆ ಸಹಕಾರಿ: ‘ದೇಶದ ಪ್ರತಿ ಜಿಲ್ಲೆಯಲ್ಲೂ ನವೋದಯ ವಿದ್ಯಾಲಯ ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಈ ವಿದ್ಯಾಲಯಗಳು ಸಹಕಾರಿಯಾಗಿವೆ. ವಿದ್ಯಾಲಯದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ’ ಎಂದು ನವೋದಯ ವಿದ್ಯಾಲಯ ಸಮಿತಿ ಉಪ ಆಯುಕ್ತ ನಾಗಾರೆಡ್ಡಿ ಉಮಾಮಹೇಶ್ವರರಾವ್ ಹೇಳಿದರು.

‘ನವೋದಯ ವಿದ್ಯಾಲಯದಲ್ಲಿ ಶೇ 75ರಷ್ಟು ಸೀಟುಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತು ಶೇ 33ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನವೋದಯ ವಿದ್ಯಾಲಯದ ಪ್ರಾಂಶುಪಾಲ ಎಸ್.ಸುಧಾಕರರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಮೋಹನ್‌ಬಾಬು, ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಮ್ಮ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು ಪಾಲ್ಗೊಂಡಿದ್ದರು.

Post Comments (+)