ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ–ಲೆಕ್ಕಾಧಿಕಾರಿಗೆ ದಿಗ್ಭಂದನ

ಕರ್ತವ್ಯ ನಿರ್ಲಕ್ಷ್ಯ: ಗ್ರಾ.ಪಂ ಅಧ್ಯಕ್ಷರು–ಸದಸ್ಯರ ಆಕ್ರೋಶ
Last Updated 28 ಸೆಪ್ಟೆಂಬರ್ 2021, 16:09 IST
ಅಕ್ಷರ ಗಾತ್ರ

ಕೋಲಾರ: ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ತಾಲ್ಲೂಕಿನ ಹೋಳೂರು ಗ್ರಾ.ಪಂ ಪಿಡಿಒ, ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿಯನ್ನು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮಂಗಳವಾರ ಒಟ್ಟಾಗಿ ಗ್ರಾ.ಪಂ ಕಚೇರಿಯಲ್ಲಿ ಕೂಡಿ ಹಾಕಿ ಎಚ್ಚರಿಕೆ ನೀಡಿದರು.

‘ತಾಲ್ಲೂಕಿನ ಉರಿಗಿಲಿ ಗ್ರಾ.ಪಂ ಪಿಡಿಒ ಕಾಮತ್ ಅವರನ್ನು ಪ್ರಭಾರವಾಗಿ ಹೋಳೂರು ಗ್ರಾ.ಪಂಗೆ ನಿಯೋಜಿಸಿ ಒಂದು ತಿಂಗಳಾಗಿದೆ. ಆದರೆ, ಅವರು ಕಚೇರಿಗೆ ಬರುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಅವರ ಕರ್ತವ್ಯ ನಿರ್ಲಕ್ಷ್ಯದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ’ ಎಂದು ಗ್ರಾ.ಪಂ ಅಧ್ಯಕ್ಷೆ ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದರು.

‘ಲೆಕ್ಕಾಧಿಕಾರಿ ಹಾಗೂ ಇತರೆ ಸಿಬ್ಬಂದಿ ಸಹ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಕೆಲಸದ ಅವಧಿಯಲ್ಲಿ ಸಿಬ್ಬಂದಿ ಕಚೇರಿಯಲ್ಲಿ ಇರುವುದಿಲ್ಲ. ಇದರಿಂದ ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಕ್ಕೆ ಪದೇಪದೇ ಗ್ರಾ.ಪಂ ಕಚೇರಿಗೆ ಅಲೆಯುವಂತಾಗಿದೆ. ಸಕಾಲಕ್ಕೆ ಕಚೇರಿಗೆ ಬರುವಂತೆ ಹಲವು ಬಾರಿ ಸೂಚಿಸಿದರೂ ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿಯ ಅದೇ ಚಾಳಿ ಮುಂದುವರಿಸಿದ್ದಾರೆ’ ಎಂದು ದೂರಿದರು.

‘ಸಿಬ್ಬಂದಿಯ ಮನಸ್ಥಿತಿ ಬದಲಾಗಬೇಕು. ಜನರ ಸಮಸ್ಯೆ ಬಗೆಹರಿಸುವವರೆಗೂ ಕಚೇರಿಯಿಂದ ಹೊರಗೆ ಬಿಡುವುದಿಲ್ಲ’ ಎಂದು ಸದಸ್ಯರು ಪಟ್ಟು ಹಿಡಿದರು.
ಈ ಸಂಗತಿ ತಿಳಿದು ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ವಿ.ಬಾಬು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಆಗ ಮಾತನಾಡಿದ ಅಧ್ಯಕ್ಷೆ ಪ್ರಿಯಾಂಕಾ, ‘ಹೋಳೂರು ಹೋಬಳಿ ಕೇಂದ್ರವಾಗಿದ್ದು, ಪ್ರತಿನಿತ್ಯ ನೂರಾರು ಮಂದಿ ಗ್ರಾ.ಪಂಗೆ ಬರುತ್ತಾರೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸದ್ಯ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು ಜನ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಚರ್ಚಿಸಲು ಪಿಡಿಒ ನಮ್ಮ ಕೈಗೆ ಸಿಗದಿದ್ದರೆ ಹೇಗೆ? ಕಾಮತ್‌ ಅವರಿಗೆ ಉರಿಗಿಲಿ, ಹೋಳೂರು ಮತ್ತು ತಾ.ಪಂ ಕಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಿದ್ದು, ನಮ್ಮ ಗ್ರಾ.ಪಂ ಕೆಲಸ ಯಾರು ಮಾಡುತ್ತಾರೆ?’ ಎಂದು ಪ್ರಶ್ನಿಸಿದರು.

ಪರಿಹಾರದ ಭರವಸೆ: ‘ಜನಪ್ರತಿನಿಧಿಗಳ ಸಮಸ್ಯೆ ಆಲಿಸಿದ ಕಾರ್ಯ ನಿರ್ವಹಣಾಧಿಕಾರಿ, ‘ಪಿಡಿಒಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವ ಸಂಗತಿಯನ್ನು ಜಿ.ಪಂ ಸಿಇಒ ಗಮನಕ್ಕೆ ತಂದಿದ್ದೇವೆ. ಶೀಘ್ರವೇ ಸಮಸ್ಯೆ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಜನಪ್ರತಿನಿಧಿಗಳು ಸಂಜೆ ವೇಳೆಗೆ ಕಚೇರಿಯ ಬೀಗ ತೆಗೆದು ಸಿಬ್ಬಂದಿಯನ್ನು ಬಿಟ್ಟು ಕಳುಹಿಸಿದರು.

ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಶ್ರೀರಾಮಪ್ಪ, ಶಿವಾನಂದ, ತಾ.ಪಂ ಮಾಜಿ ಸದಸ್ಯ ಗೋಪಾಲಗೌಡ, ಗ್ರಾ.ಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT