ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎ ಕಡಿಮೆ ಮಾಡಲು ಮುಂದಾಗಿ

ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಗೋವಿಂದಗೌಡ ಸೂಚನೆ
Last Updated 11 ಜನವರಿ 2020, 13:39 IST
ಅಕ್ಷರ ಗಾತ್ರ

ಕೋಲಾರ: ‘ಸಾಲ ವಸೂಲಿ ಮಾಡುವ ಮೂಲಕ ಡಿಸಿಸಿ ಬ್ಯಾಂಕಿನ ಶೇ.೩.೯೨ರಷ್ಟು ಇರುವ ಎನ್‌ಪಿಎ ಪ್ರಮಾಣ ಕಡಿಮೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೂಚಿಸಿದರು.

ನಗರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್ ಹಾಗೂ ಸೊಸೈಟಿ ನಡುವೆ ಇರುವ ₹15ಕೋಟಿ ಸಾಲದ ಅಂತರವನ್ನು ಬೆಳೆ ಸಾಲದ ಲಾಭಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಬ್ಯಾಂಕಿನ ಸಿಬ್ಬಂದಿ ಮತ್ತು ಕುಟುಂಬದವರು ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಇತರರಿಗೆ ಮಾದರಿ ಆಗಬೇಕು. ಸಹಕಾರಿ ವ್ಯವಸ್ಥೆಯಲ್ಲಿ ಸಂಬಳ ಪಡೆದುಕೊಳ್ಳುವವರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹಣದ ವಹಿವಾಟು ಮಾಡುವುದು ನಮಗೆ ನಾವು ಮಾಡಿಕೊಳ್ಳುವ ಅಪಮಾನ’ ಎಂದು ಎಚ್ಚರಿಸಿದರು.

‘ಎರಡೂ ಜಿಲ್ಲೆಯ ಸೊಸೈಟಿಗಳಿಗೆ ನಬಾರ್ಡ್‌ ಮೈಕ್ರೋ ಎಟಿಎಂ ವ್ಯವಸ್ಥೆ ಕಲ್ಪಿಸುತ್ತಿದ್ದು, ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆ ಕಲ್ಪಿಸಲು ಮತ್ತಷ್ಟು ಅವಕಾಶ ಸಿಕ್ಕಿದೆ. ಬ್ಯಾಂಕಿನ ಸಾಧನೆ ಪರಿಗಣಿಸಿ ಎಟಿಎಂಗೆ ಶೇ.೯೦ ಧನಸಹಾಯ ನೀಡುತ್ತಿದ್ದು ಜತೆಗೆ ಎರಡು ಮೊಬೈಲ್ ಎಟಿಎಂ ವಾಹನಗಳನ್ನು ಮಂಜೂರು ಮಾಡಿದೆ’ ಎಂದು ಹೇಳಿದರು.

‘ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಠೇವಣಿ ಸಂಗ್ರಹಣೆಯ ಗುರಿ ನೀಡಲಾಗಿದೆ. ಹೀಗಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳು ಆಂದೋಲನದ ಮಾದರಿಯಲ್ಲಿ ಠೇವಣಿ ಸಂಗ್ರಹಕ್ಕೆ ಮುಂದಾಗಬೇಕು. ಕೆಲಸ ವಿಚಾರದಲ್ಲಿ ಮೈಗಳ್ಳತನಕ ತೋರಿಸಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಅನುದಾನ ಬಳಕೆಯಲ್ಲಿ ಅವ್ಯವಹಾರ ನಡೆದಿದ್ದು ತನಿಖೆ ನಡೆಯುತ್ತಿದೆ. ಕೋಲಾರ–ಚಿಕ್ಕಬಳ್ಳಾಪುರ ಬ್ಯಾಂಕಿನ ಅಧಿಕಾರಿಗಳು ಪಾರದರ್ಶಕ ಆಡಳಿತ ಸೇವೆ ಸಲ್ಲಿಸಿರುವುದರಿಂದ ರಾಷ್ಟ್ರಮಟ್ಟದಲ್ಲಿ ನಂಬಿಕೆ ಉಳಿಸಿಕೊಂಡಿದೆ’ ಎಂದು ಸಂತಸವ್ಯಕ್ತಪಡಿಸಿದರು.

‘ಅಪೆಕ್ಸ್ ಬ್ಯಾಂಕ್‌ಗೆ ₹102ಕೋಟಿ ಸಾಲ ಪಾವತಿ ಮಾಡದಿದ್ದರೆ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ಸ್ಪರ್ಧೆ ಮಾಡಲು ಅವಕಾಶ ಇರುವುದರಿಲ್ಲ. ಇದೇ ಮೊದಲ ಬಾರಿಗೆ ಸಾಲ ಮತ್ತು ಚುನಾವಣೆಗೆ ಸಮೀಕರಣ ಆಗಿರುವುದರಿಂದಾಗಿ ಸಿಬ್ಬಂದಿ ಸಾಲ ವಸೂಲಾತಿ ಹಾಗೂ ಠೇವಣಿ ಸಂಗ್ರಹಕ್ಕೆ ಒತ್ತು ನೀಡಬೇಕು’ ಎಂದು ತಾಕೀತು ಮಾಡಿದರು.

ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜ, ನಿರ್ದೇಶಕರಾದ ಹನುಮಂತರೆಡ್ಡಿ, ಎನ್.ಸೋಮಶೇಖರ್, ಎಂ.ಎಲ್.ಅನಿಲ್ ಕುಮಾರ್, ಎನ್.ನಾಗಿರೆಡ್ಡಿ, ಆರ್.ನಾರಾಯಣರೆಡ್ಡಿ, ಎಚ್.ಎಸ್.ಮೋಹನ್ ರೆಡ್ಡಿ, ಅಶ್ವಥಪ್ಪ, ವ್ಯವಸ್ಥಾಪಕ ನಿರ್ದೇಶಕ ಎಂ.ರವಿ, ಎಜಿಎಂಗಳಾದ ಎಂ.ಆರ್.ಶಿವಕುಮಾರ್, ಎನ್.ಬೈರೇಗೌಡ, ಖಲೀಂವುಲ್ಲಾ, ಎಂ.ಚೌಡಪ್ಪ, ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT