ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ ವಿರುದ್ಧ ಟೀಕೆ ಬೇಡ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಮನವಿ
Last Updated 31 ಜುಲೈ 2020, 15:07 IST
ಅಕ್ಷರ ಗಾತ್ರ

ಕೋಲಾರ: ‘ಬಡವರು ಹಾಗೂ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿರುವ ಡಿಸಿಸಿ ಬ್ಯಾಂಕ್ ವಿರುದ್ಧ ಟೀಕೆ ಮಾಡಬಾರದು. ಪಕ್ಷಾತೀತವಾಗಿ ಸಲಹೆ ನೀಡಿ ಬ್ಯಾಂಕ್‌ ಶಕ್ತಿ ತುಂಬುವ ಕೆಲಸ ಮಾಡೋಣ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವಿಭಜಿತ ಕೋಲಾರ ಜಿಲ್ಲೆಯ ರಾಜಕಾರಣಿಗಳಿಗೆ ಮನವಿ ಮಾಡಿದರು.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಡಿಸಿಸಿ ಬ್ಯಾಂಕ್‌ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿಶಿನ, ಕುಂಕುಮ, ತಾಂಬೂಲ ಮತ್ತು ಸಿಹಿ ಜತೆ ₹ 1 ಕೋಟಿ ಸಾಲ ವಿತರಿಸಿ ಮಾತನಾಡಿದರು.

‘ಬಡ ಮಹಿಳೆಯರ ಜತೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡುತ್ತಿರುವುದಕ್ಕೆ ಸಂತಸವಾಗಿದೆ. ನಾನು ಸಹಕಾರಿಯಾಗಿ ವಿಶ್ವದೆಲ್ಲೆಡೆ ಓಡಾಡಿದ್ದೇನೆ. ಹೆಣ್ಣು ಮಕ್ಕಳಿಗೆ ಸಂಕಷ್ಟದಲ್ಲೂ ಇಷ್ಟೊಂದು ಹಣಕಾಸು ನೆರವು ನೀಡುತ್ತಿರುವುದನ್ನು ಎಲ್ಲಿಯೂ ನೋಡಿಲ್ಲ’ ಎಂದು ತಿಳಿಸಿದರು.

‘ರಾಜಕೀಯ ದುರುದ್ದೇಶಕ್ಕೆ ಬ್ಯಾಂಕ್ ವಿರುದ್ಧ ಟೀಕೆ ಮಾಡುವ ಹೊಲಸು ರಾಜಕಾರಣ ಬೇಡ. ಅನಗತ್ಯ ಟೀಕೆ ಬಿಟ್ಟು ಮತ್ತಷ್ಟು ಮಹಿಳೆಯರು ಮತ್ತು ರೈತರಿಗೆ ನೆರವಾಗಲು ಸಲಹೆ ನೀಡೋಣ. ನನಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಸಹಕಾರಿ ರಂಗವನ್ನು ಬಲಪಡಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸೋಣ’ ಎಂದು ಕಿವಿಮಾತು ಹೇಳಿದರು.

‘ಬ್ಯಾಂಕ್‌ನ ಹಿಂದಿನ ನೆನಪು ಈಗ ಬೇಡ. ಬ್ಯಾಂಕ್‌ನ ಈಗಿನ ಆಡಳಿತ ಮಂಡಳಿಯು ಇಡೀ ರಾಜ್ಯದ ದೃಷ್ಟಿ ಕೋಲಾರದ ಮೇಲೆ ಬೀಳುವಂತೆ ಕೆಲಸ ಮಾಡಿದೆ. ಇಷ್ಟೊಂದು ಸಾಧನೆ ನಡುವೆಯೂ ಪ್ರೋತ್ಸಾಹಿಸುವ ಬದಲಿಗೆ ಟೀಕೆ ಮಾಡುವುದು ಶೋಭೆಯಲ್ಲ’ ಎಂದು ಅಭಿಪ್ರಾಯಪಟ್ಟರು.

ತವರು ಮನೆ: ‘ವರಮಹಾಲಕ್ಷ್ಮಿ ಹಬ್ಬದಂದು ಯಾರೂ ಹಣ ಕೊಡಬಾರದೆಂಬ ಸಂಪ್ರದಾಯವಿದೆ. ಆದರೆ, ಡಿಸಿಸಿ ಬ್ಯಾಂಕ್ ಈ ದಿನವೇ ಮಹಿಳೆಯರಿಗೆ ಸಾಲದ ನೆರವು ನೀಡಿ ಅವರ ಮನೆಗೆ ಲಕ್ಷ್ಮಿ ಕಳುಹಿಸಿ ಕೊಡುತ್ತಿದೆ. ಮಹಿಳೆಯರ ಪಾಲಿಗೆ ಬ್ಯಾಂಕ್ ತವರು ಮನೆ ಇದ್ದಂತೆ. ಸಾಲ ಪಡೆದ ಮಹಿಳೆಯರೇ ನಮಗೆ ವರ ಮಹಾಲಕ್ಷ್ಮೀಯರು’ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

‘ಮಹಿಳೆಯರು ಬ್ಯಾಂಕ್ನ ಕುಟುಂಬ ಸದಸ್ಯರಿದ್ದಂತೆ. ದೊಡ್ಡ ಆಂದೋಲನದ ರೀತಿ ಕೋಲಾರ ತಾಲ್ಲೂಕು ಒಂದರಲ್ಲೇ ಒಂದು ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಮಾಹಿತಿ ನೀಡಿದರು.

ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಸೊಣ್ಣೇಗೌಡ, ನರ್ಮದಾ ಸಹಕಾರ ಸಂಘದ ಅಧ್ಯಕ್ಷೆ ಅರುಣಮ್ಮ, ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT