ಸೋಮವಾರ, ಆಗಸ್ಟ್ 2, 2021
28 °C
ತಾಲ್ಲೂಕಿನ ಕೆರೆಗಳ ಮೇಲೆ ಭೂ ಮಾಫಿಯಾ– ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣು

ಬಂಗಾರಪೇಟೆ: ಶೇ 92ರಷ್ಟು ಕೆರೆಗಳು ಮಾಯ

ಕಾಂತರಾಜ್ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ತಾಲ್ಲೂಕಿನಲ್ಲಿ ಸದ್ದಿಲ್ಲದೆ ಕೆರೆಗಳು ಮಾಯವಾಗುತ್ತಿವೆ. ಮೈಸೂರು ಸರ್ಕಾರ 1968ರಲ್ಲಿ ಪ್ರಕಟಿಸಿದ ಗೆಜೆಟಿಯರ್ ಪ್ರಕಾರ ತಾಲ್ಲೂಕಿನಲ್ಲಿ 6,563 ಕೆರೆಗಳಿದ್ದವು. ಅದು ಈಗ ಮೂರಂಕಿಗೆ ಇಳಿದಿದೆ.

ಶೇ 92.5ರಷ್ಟು ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ. 2012ರಲ್ಲಿ ಶೇ 7.5ರಷ್ಟು ಕೆರಗಳು ಮಾತ್ರ ಲೆಕ್ಕಕ್ಕೆ ಸಿಕ್ಕಿವೆ. ಅಂದರೆ 495 ಕೆರೆಗಳು ಮಾತ್ರ ಪತ್ತೆಯಾಗಿವೆ. ಕಳೆದ 8 ವರ್ಷದಿಂದ ಮತ್ತಷ್ಟು ಕೆರೆಗಳು ನಾಪತ್ತೆಯಾಗಿಲ್ಲ.

ನಗರ ಮತ್ತು ಪಟ್ಟಣದ ವ್ಯಾಪ್ತಿಯಲ್ಲಿ ಕೆರೆಗಳು ಬಡಾವಣೆ ನಿರ್ಮಾಣಕ್ಕೆ ಒತ್ತುವರಿಯಾಗಿವೆ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಪಟ್ಟಣದ ಒಬ್ಬಟ್ಲು ಕೆರೆ, ಕೆಜಿಎಫ್ ನಗರಸಭೆ ವ್ಯಾಪ್ತಿಯ ಸುಮಾರು 10 ಎಕರೆ ವಿಸ್ತೀರ್ಣದ ಗಂಗದೊಡ್ಡಿ ಕೆರೆ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿವೆ. ಮಸ್ಕಂ ಗೌಡನಕೆರೆ, ಪಟ್ಟಣದ ದೊಡ್ಡಕೆರೆ ಅಂಗಳದಲ್ಲಿ ಬಡಾವಣೆಗಳು ತಲೆ ಎತ್ತಿವೆ. ಇದು ಕೇವಲ ಒಂದು ಉದಾಹರಣೆಯಷ್ಟೆ. ಲೆಕ್ಕಕ್ಕೆ ಸಿಗದ ಎಷ್ಟೋ ಕೆರೆಗಳು ಅಸ್ತಿತ್ವವನ್ನೇ ಕಳೆದುಕೊಂಡಿವೆ.

ಒಡೆದಿರುವ ಗೌಡನಕೆರೆ ಕಟ್ಟೆ ಕಟ್ಟಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ಎಚ್.ವಿ.ದರ್ಶನ್ ಅವರು ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗೆ ಆದೇಶ ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ನಾಲೆಗಳು ಇಲ್ಲದಿರುವ ತಾಲ್ಲೂಕಿಗೆ ಕೆರೆಗಳೇ ಜೀವಾಳ. ಆದರೆ, ಭೂ ಮಾಫಿಯ ಮತ್ತು ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣು ಕೆರೆಗಳ ಮೇಲೆ ಬಿದ್ದಿರುವುದರಿಂದ ಅವುಗಳಿಗೆ ಉಳಿಗಾಲವಿಲ್ಲವಾಗಿದೆ.

ತಾಲ್ಲೂಕಿನಲ್ಲಿ 910 ಎಕರೆ ಒತ್ತುವರಿಯಾಗಿದೆ. 2012ರ ವರದಿಯಲ್ಲಿ ಜಿಲ್ಲಾಡಳಿತವೇ ಇದನ್ನು ಉಲ್ಲೇಖಿಸಿದೆ. ಒತ್ತುವರಿ ವಿಚಾರದಲ್ಲಿ ಬಂಗಾರಪೇಟೆ ತಾಲ್ಲೂಕು ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಶ್ರೀನಿವಾಸಪುರ ಮತ್ತು ಕೋಲಾರ ಮೊದಲೆರಡು ಸ್ಥಾನದಲ್ಲಿವೆ.

ತಲೆಮಾರುಗಳಿಂದ ನೀರುಣಿಸಿದ ಕೆರೆಗಳು ನಿರಂತರ ಒತ್ತುವರಿಗೆ ಒಳಗಾಗುತ್ತಿವೆ. ಒತ್ತುವರಿ ತೆರವು ಮಾಡಿ, ಅವುಗಳನ್ನು ರಕ್ಷಿಸುವ
ಪ್ರಯತ್ನ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ.

ಪಟ್ಟಣದ ಅತ್ತಿಗಿರಿಕೊಪ್ಪದ ಕೆರೆಯ ಸುಮಾರು 8 ಎಕರೆ, ದೇಶಹಳ್ಳಿ ಕೆರೆಯ ಸುಮಾರು 4 ಎಕರೆ ಜಾಗದಲ್ಲಿ ಕೆಲವರು ರಾಸುಗಳಿಗೆ ಜೋಳ ಸೇರಿದಂತೆ ಇತರೆ ಬೆಳೆ ಬೆಳೆದಿದ್ದಾರೆ. ಹಲ ವರ್ಷದಿಂದ ಮಳೆ ಇಲ್ಲದೆ ಕೆರೆಗಳಿಗೆ ನೀರು ತುಂಬುತ್ತಿಲ್ಲ. ರಾಜಕಾಲುವೆಗಳ ಒತ್ತುವರಿಯಿಂದಾಗಿ ಮಳೆ ಬಂದರೂ ಕೆರೆಗಳಿಗೆ ನೀರು ಹರಿಯುತ್ತಿಲ್ಲ.

2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಜಿಲ್ಲೆಯ 144 ಕೆರೆಗಳ ಸರ್ವೆ ಮಾಡಲು ಆದೇಶಿಸಿದ್ದರು. ಅಲ್ಲದೆ ಸರ್ವೆ ಮಾಡಲು ಒಂದು ಕೆರೆಗೆ ₹3 ಸಾವಿರದಂತೆ ₹4.32 ಲಕ್ಷ ಹಣ ಬಿಡುಗಡೆ ಕೂಡ ಮಾಡಿದ್ದರು. ಆದರೆ, ತೆರವು ಕಾರ್ಯಾಚರಣೆ ನಡೆದಿದ್ದು ಅಷ್ಟಕ್ಕಷ್ಟೆ.

ಕೋಲಾರ ತಾಲ್ಲೂಕಿನ ಮೂರಾಂಡಹಳ್ಳಿ ದ್ಯಾವರಪ್ಪ ಅವರ ಲಿಖಿತ ಮನವಿ ಮೇರೆಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಇದೇ ಮಾರ್ಚ್ 16ರಂದು ಮತ್ತೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದು, ಕೆರೆಗಳ ಒತ್ತುವರಿ ತೆರವುಗೊಳಿಸಿ, ಜಲಮೂಲ ಅಭಿವೃದ್ಧಿಪಡಿಸುವಂತೆ ಆದೇಶಿಸಿದ್ದಾರೆ. ಒತ್ತುವರಿ ತೆರವು ಕಾರ್ಯ ಆರಂಭವಾಗಿದೆಯಾದರೂ ನಿರೀಕ್ಷೆಯಂತೆ ನಡೆಯುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು