ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಬೇಡ: ಕೋಡಿಹಳ್ಳಿ ಚಂದ್ರಶೇಖರ್

ಬೀದಿಗಿಳಿದು ಹೋರಾಟದ ಎಚ್ಚರಿಕೆ
Last Updated 24 ಜೂನ್ 2020, 13:57 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರ ರೈತರನ್ನು ಕೃಷಿಯಿಂದ ಹೊರಗಿಟ್ಟು ಕಾರ್ಪೊರೇಟ್‌ ಕಂಪನಿಗಳ ಕೃಷಿಗೆ ಉತ್ತೇಜನ ನೀಡಲು ಹೊರಟಿದೆ. ಈ ಅವೈಜ್ಞಾನಿಕ ಮರಣ ಶಾಸನ ವಾಪಸ್‌ ಪಡೆಯಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ವಿದೇಶಿ ಕಂಪನಿಗಳ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಕಾನೂನು ಜಾರಿಗೊಳಿಸಲು ಮುಂದಾಗಿದೆ. ರೈತರು ಬೀದಿಗಿಳಿದು ಉಗ್ರ ಹೋರಾಟ ನಡೆಸುವ ಮುನ್ನ ಸರ್ಕಾರ ಈ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು’ ಎಂದು ಎಚ್ಚರಿಕೆ ನೀಡಿದರು.

‘ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದೇ ರೀತಿ ಭೂಸ್ವಾಧೀನ ಕಾಯ್ದೆ ಜಾರಿಗೊಳಿಸಲು ಮುಂದಾದಾಗ ಕೆಲ ರಾಜ್ಯಗಳು ವಿರೋಧಿಸಿದ್ದವು. ಆಗ ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿತ್ತು. ಆದರೆ, ಈಗ ಸದನದಲ್ಲಿ ಚರ್ಚಿಸಿ ಅಂಗೀಕಾರ ಪಡೆಯದೆ ಏಕಾಏಕಿ ರೈತ ವಿರೋಧಿ ಕಾಯ್ದೆ ಜಾರಿಗೆ ಮುಂದಾಗಿರುವುದು ಖಂಡನೀಯ’ ಎಂದರು.

‘ತಿದ್ದುಪಡಿ ಕಾಯ್ದೆಯಲ್ಲಿ ರೈತರಿಗೆ ಮಾರಕವಾದ ಅಂಶಗಳಿವೆ. ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಗೆ ಅವಕಾಶ ನೀಡಬಾರದು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನವ ಉದಾರವಾದಿ ಆರ್ಥಿಕ ಧೋರಣೆಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಿದೆ. ಇದರಿಂದ ರೈತರು, ಕೃಷಿ ಕೂಲಿಕಾರರು, ಮೀನುಗಾರಿಕೆಯಲ್ಲಿ ತೊಡಗಿರುವವರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೃಷಿ ಉತ್ಪನ್ನ ಮಾರಾಟ, ವಾಣಿಜ್ಯ ಹಾಗೂ ಬೆಲೆ ಖಾತರಿ, ಕೃಷಿ ಸೇವೆ ಕುರಿತ ರೈತರ ಒಪ್ಪಂದದ ಸುಗ್ರೀವಾಜ್ಞೆ ಒಕ್ಕೂಟದ ತತ್ವಕ್ಕೆ ವಿರುದ್ಧವಾಗಿದೆ. ಕೇಂದ್ರವು ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ರೈತರ ಹಿತಕ್ಕೆ ವಿರುದ್ಧವಾಗಿರುವ ಈ ಸುಗ್ರೀವಾಜ್ಞೆ ದೊಡ್ಡ ವ್ಯಾಪಾರಸ್ಥರು ಹಾಗೂ ಖರೀದಿದಾರರಿಗೆ ಅನುಕೂಲಕರವಾಗಿದೆ’ ಎಂದು ಆರೋಪಿಸಿದರು.

ನಿರ್ಧಾರ ಕೈಬಿಡಬೇಕು: ‘ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಹೊರಟಿರುವುದು ಸರಿಯಲ್ಲ. ಬಾಹ್ಯಾಕಾಶ ಸಂಶೋಧನೆ, ಕೃಷಿ ಸೇರಿದಂತೆ ಬಹುತೇಕ ಸೇವಾ ಕ್ಷೇತ್ರಗಳನ್ನು ಖಾಸಗಿಯವರಿಗೆ ನೀಡುವ ನಿರ್ಧಾರ ಕೈಬಿಡಬೇಕು’ ಎಂದರು.

ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಕಾರ್ಯದರ್ಶಿ ವೀರಭದ್ರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT