ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀನಿವಾಸಗೌಡ ಪಕ್ಷ ತೊರೆದರೆ ನಷ್ಟವಿಲ್ಲ’

ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ವ್ಯಂಗ್ಯ
Last Updated 27 ಸೆಪ್ಟೆಂಬರ್ 2021, 5:51 IST
ಅಕ್ಷರ ಗಾತ್ರ

ಕೋಲಾರ: ‘ಶಾಸಕ ಕೆ. ಶ್ರೀನಿವಾಸಗೌಡ ಅವರು ಜೆಡಿಎಸ್‌ ತೊರೆಯುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘40 ವರ್ಷಗಳಿಂದ ರಾಜಕಾರಣದಲ್ಲಿರುವ ಅವರು ಒಂದು ದಿನವೂ ಕಾರ್ಯಕರ್ತರ ಸಭೆ ನಡೆಸಿಲ್ಲ. ಆದರೂ ಅವರು ಹೋಗುವ ಸಭೆಗಳಲ್ಲಿ ನಾನು ನಾಲ್ಕು ಬಾರಿ ನಾಲ್ಕು ಪಕ್ಷದಿಂದ ಶಾಸಕನಾದೆ ಎಂದು ಹೇಳುತ್ತಿದ್ದಾರೆ. ಅವರು ಜೆಡಿಎಸ್ ಪಕ್ಷದ ದೋಣಿಯೂ ಅಲ್ಲ. ದೋಣಿ ನಡೆಸುವ ನಾವಿಕನೂ ಅಲ್ಲ’ ಎಂದು ಟೀಕಿಸಿದರು.

‘ಕೋಲಾರ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ಪಡೆದುಕೊಳ್ಳಲು ನಾವು ಪಟ್ಟ ಪಾಡು ನಮಗೆ ಗೊತ್ತು. ಮನೆಯಲ್ಲಿದ್ದ ಶಾಸಕರಿಗೆ ಏನು ಗೊತ್ತು’ ಎಂದರು.

ಕಳೆದ ಚುನಾವಣೆಯಲ್ಲಿ ಮುಳಬಾಗಿಲು, ಶ್ರೀನಿವಾಸಪುರ, ಶಿಡ್ಲಘಟ್ಟ ಕ್ಷೇತ್ರಗಳಲ್ಲಿ ಕಡಿಮೆ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋಲನುಭವಿಸಿದರು. ಮಾಲೂರಿನಲ್ಲಿ ಪಕ್ಷದ ಶಾಸಕ ಮಂಜುನಾಥಗೌಡ ಅವರ ದುರಾಡಳಿತದಿಂದ ಅಲ್ಲಿ ಶಾಸಕ ಸ್ಥಾನ ಕೈತಪ್ಪುವ ಜತೆಗೆ ನಿಷ್ಠಾವಂತರಾಗಿದ್ದ ಕೆ.ವೈ. ನಂಜೇಗೌಡ ಅವರನ್ನೂ ಪಕ್ಷದಿಂದ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು.

ಸದ್ಯ ಕೋಲಾರ, ಕೆಜಿಎಫ್ ಕ್ಷೇತ್ರಗಳಿಗೆ ಮಾತ್ರವೇ ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ. ಉಳಿದ ಎಲ್ಲ ಕಡೆಗಳಲ್ಲಿಯೂ ಜೆಡಿಎಸ್ ಉತ್ತಮವಾಗಿ ಬಲಗೊಳ್ಳುತ್ತಿದೆ. ಪಿತೃಪಕ್ಷ ಮುಗಿದ ಕೂಡಲೇ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಜಿಲ್ಲೆಗೆ ಕರೆತಂದು ಪಕ್ಷವನ್ನು ಮತ್ತಷ್ಟು ಸಂಘಟಿಸಲಾಗುವುದು ಎಂದರು.

ಕ್ಯಾಲನೂರು ಜಿ.ಪಂ. ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕಡಗಟ್ಟೂರು ವಿಜಯ್‍ಕುಮಾರ್ ಮಾತನಾಡಿ, ಕೋಲಾರ, ಕೆಜಿಎಫ್ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಜಿ.ಪಂ, ತಾ.ಪಂ. ಚುನಾವಣೆಗಳಿಗೆ ಕೂಡಲೇ ಅಭ್ಯರ್ಥಿಗಳನ್ನು ಘೋಷಿಸಿದರೆ ಎಲ್ಲರೂ ಒಗ್ಗಟ್ಟಾಗಿ ಇಂದಿನಿಂದಲೇ ಕೆಲಸ ಮಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ಎನ್.ಎಸ್. ಪ್ರವೀಣ್‌ಗೌಡ, ಸದಸ್ಯ ರಾಕೇಶ್, ಮುಖಂಡರಾದ ರಾಮು, ರಾಜೇಶ್ವರಿ, ನಟರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT