ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಶ್ರೀನಿವಾಸಗೌಡ

ದೊಡ್ಡಹಸಾಳ ಗ್ರಾಮದಲ್ಲಿ ಹೇಳಿಕೆ
Last Updated 27 ಜನವರಿ 2020, 13:19 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ತಾಲ್ಲೂಕಿನ ದೊಡ್ಡಹಸಾಳ ಗ್ರಾಮದಲ್ಲಿ ಸೋಮವಾರ ರಾಜೀವ್‌ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ‘ರಾಜಕೀಯ ಚುನಾವಣೆಗಷ್ಟೇ ಸೀಮಿತವಾಗಬೇಕು. ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಕೆಲಸ ಮಾಡಬೇಕು’ ಎಂದು ಹೇಳಿದರು.

‘ದೊಡ್ಡಹಸಾಳ ಗ್ರಾಮಕ್ಕೆ ಹೈಮಾಸ್ಕ್‌ ದೀಪದ ಸೌಕರ್ಯ ಕಲ್ಪಿಸುತ್ತೇವೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಬಲ ಬಂತು. ಹಿಂದೆ ಹಳ್ಳಿಗಳಲ್ಲಿದ್ದ ಪರಿಸ್ಥಿತಿಗೂ ಇಂದಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಗ್ರಾ.ಪಂಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದಿಂದ ಅಭಿವೃದ್ಧಿ ಕೆಲಸ ಆಗುತ್ತಿವೆ. ಹಿಂದೆ ಹಳ್ಳಿಗಳಿಗೆ ಬಸ್ ಸೌಕರ್ಯವಿರಲಿಲ್ಲ. ಕಿಲೋ ಮೀಟರ್‌ಗಟ್ಟಲೇ ನಡೆದೇ ಸಾಗಬೇಕಿತ್ತು. ಈಗ ಬಸ್ ಸೌಕರ್ಯವಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ’ ಎಂದರು.

‘ಹೆಗಡೆ ಅವರ ಕಾಲದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್‌ ಸಾಬ್‌ ಪಂಚಾಯತ್‌ ರಾಜ್ ವ್ಯವಸ್ಥೆ ಬಲಪಡಿಸಿ ಪ್ರತಿ ವ್ಯಕ್ತಿಯೂ ಸೌಲಭ್ಯ ಪಡೆಯುವ ರೀತಿ ಮಾಡಿ ಹೋಗಿದ್ದಾರೆ. ಈ ವ್ಯವಸ್ಥೆಯನ್ನು ಗ್ರಾ.ಪಂಗಳು ಚೆನ್ನಾಗಿ ನಡೆಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

ಅಧಿಕಾರ ವಿಕೇಂದ್ರೀಕರಣ: ‘ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಎಂಬ 3 ಹಂತವಿದೆ. ನಜೀರ್ ಸಾಬ್ ಸಚಿವರಾಗಿದ್ದಾಗ ಮಂಡಲ ಪ್ರಧಾನ, ಉಪಪ್ರಧಾನರಿಗೆ ವಿಶೇಷ ಅಧಿಕಾರ ನೀಡಿದ್ದರು. 1993ರಲ್ಲಿ ಮಂಡಲ ಪಂಚಾಯಿತಿಗಳು ಮರುವಿಂಗಡಣೆಯಾದಾಗ ಗ್ರಾಮ ಪಂಚಾಯಿತಿಗಳಾಗಿಸಿ ಅಧಿಕಾರ ವಿಕೇಂದ್ರೀಕರಣ ಮಾಲಾಯಿತು. ಈಗ ಪ್ರತಿ ಗ್ರಾ.ಪಂಗಳಲ್ಲೂ ಕೋಟ್ಯಂತರ ರೂಪಾಯಿ ಕೆಲಸ ನಡೆಯುತ್ತಿವೆ’ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಹೇಳಿದರು.

ಸದ್ಬಳಕೆ ಆಗಬೇಕು: ‘ದೇಶದೆಲ್ಲೆಡೆ ಗ್ರಾ.ಪಂಗಳಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಒಡಿಶಾ ರಾಜ್ಯ ಈ ಸೌಲಭ್ಯವನ್ನು ಹೆಚ್ಚು ಬಳಕೆ ಮಾಡಿಕೊಂಡಿದೆ. ರಾಜೀವ್‌ಗಾಂಧಿ ಸೇವಾ ಕೇಂದ್ರ ಸದ್ಬಳಕೆ ಆಗಬೇಕು. ಕೇಂದ್ರದ ಸಿಬ್ಬಂದಿಗೆ ತರಬೇತಿ ನೀಡಬೇಕು’ ಎಂದು ಜಿ.ಪಂ ಒಂಬುಡ್ಸ್‌ಮನ್‌ ಶ್ರೀರಾಮಯ್ಯ ತಿಳಿಸಿದರು.

ದೊಡ್ಡಹಸಾಳ ಗ್ರಾಪಂ ಅಧ್ಯಕ್ಷ ಡಿ.ಕೆ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಂಬಿಕಾ, ಪಿಡಿಒ ಸಿ.ಆರ್.ಗೌಡ, ಕಾರ್ಯದರ್ಶಿ ನಾರಾಯಣಸ್ವಾಮಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಎನ್.ವಿ.ಬಾಬು, ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT