ಗುರುವಾರ , ಸೆಪ್ಟೆಂಬರ್ 23, 2021
26 °C

ವಿರೋಧಿಗಳ ಷಡ್ಯಂತ್ರಕ್ಕೆ ಬೆದರಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕಾಂಗ್ರೆಸ್‌ ಪಕ್ಷ ದೊಡ್ಡದು. ಚುನಾವಣೆ ವೇಳೆ ನಾಯಕರಲ್ಲಿ ಭಿನ್ನಾಭಿಪ್ರಾಯ ಸಹಜ. ಪಕ್ಷದ ಮುಖಂಡರೆಲ್ಲಾ ಭಿನ್ನಾಭಿಪ್ರಾಯ ಮರೆತು ಅವರವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಪರ ಪ್ರಚಾರ ನಡೆಸಿ ಗೆಲುವಿಗೆ ಶ್ರಮಿಸುತ್ತಾರೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ವಿರುದ್ಧ ವಿರೋಧಿಗಳು ಎಷ್ಟೇ ಸಭೆ ನಡೆಸಿದರೂ ಯಾರು ಕ್ಷೇತ್ರದ ಸಂಸದರಾಗಬೇಕು ಎಂಬುದನ್ನು ಜನ ನಿರ್ಧರಿಸುತ್ತಾರೆ. ವಿರೋಧಿಗಳ ಷಡ್ಯಂತ್ರಕ್ಕೆ ಬೆದರಲ್ಲ’ ಎಂದು ತಿರುಗೇಟು ನೀಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ನಾನು ಕೆಲಸ ಮಾಡಿದ್ದೇನೆ. ಈಗ ಅವರೆಲ್ಲಾ ನನ್ನ ಪರವಾಗಿ ಕೆಲಸ ಮಾಡಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ವರಿಷ್ಠರು ತೀರ್ಮಾನ ಮಾಡಿ ನನ್ನನ್ನು ಮೈತ್ರಿಕೂಟದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಸ್ವಪಕ್ಷೀಯ ನಾಯಕರು ಸಭೆ, ಸಮಾವೇಶ ನಡೆಸಲು ಸ್ವತಂತ್ರರು. ಯಾರ ವಿರುದ್ಧವೂ ಎಐಸಿಸಿಗೆ ದೂರು ನೀಡುವುದಿಲ್ಲ. ಇಲ್ಲಿ ನಾನೇ ಹೈಕಮಾಂಡ್’ ಎಂದರು.

‘ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾದರೆ ತಾವೇ ಗೆದ್ದೆವು ಎನ್ನುತ್ತಾರೆ. ಸೋತರೆ ಮುನಿಯಪ್ಪ ಸೋಲಿಸಿದರು ಎನ್ನುತ್ತಾರೆ. ಸೋಲಿಸುವಷ್ಟು ಶಕ್ತಿ ನನಗಿದೆ ಎಂದು ಪ್ರಮಾಣಪತ್ರ ನೀಡಿದ್ದಾರಲ್ಲ, ಚುನಾವಣೆಯಲ್ಲಿ ನಾನು ತುಳಿದಿದ್ದರೆ ಅವರು ಗೆಲ್ಲುತ್ತಿದ್ದರೆ? ದೇವರು ಅವರಿಗೆ ಇನ್ನಾದರೂ ಒಳ್ಳೆ ಬುದ್ಧಿ ಕೊಡಲಿ’ ಎಂದು ವ್ಯಂಗ್ಯವಾಡಿದರು.

ಸಂಪರ್ಕಕ್ಕೆ ಸಿಗಲಿಲ್ಲ: ‘ನಾಮಪತ್ರ ಸಲ್ಲಿಕೆ ವೇಳೆ ಜತೆಗಿರುವಂತೆ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ವಿ.ಮುನಿಯಪ್ಪ, ಎಚ್.ನಾಗೇಶ್, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದೆಂಬ ಭಾವನೆಯಿಂದ ಅವರೆಲ್ಲಾ ಭಿನ್ನಾಭಿಪ್ರಾಯ ಮರೆತು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎಂದರು.

ತೀರ್ಮಾನವಾಗಿಲ್ಲ: ‘ಪರಿಶಿಷ್ಟ ಜಾತಿಗಳಲ್ಲಿ 101 ಉಪ ಜಾತಿಗಳಿವೆ. ಇವುಗಳ ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಸ್ಥಿತಿಗತಿ ಬಗ್ಗೆ ಎ.ಜೆ.ಸದಾಶಿವ ಆಯೋಗವು ಸಮೀಕ್ಷೆ ನಡೆಸಿ ಸಲ್ಲಿಸಿದ್ದ ವರದಿ ಬಗ್ಗೆ ಮೂರ್ನಾಲ್ಕು ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾದರೂ ಜಾರಿ ಸಂಬಂಧ ಅಂತಿಮ ತೀರ್ಮಾನವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪರಿಶಿಷ್ಟ ಜಾತಿಯಲ್ಲಿನ ಬಲಗೈ, ಎಡಗೈ, ಲಂಬಾಣಿ, ಭೋವಿ ಹೀಗೆ ಜನಸಂಖ್ಯೆ ಆಧಾರದಲ್ಲಿ ಶೈಕ್ಷಣಿಕ, ಆರ್ಥಿಕ, ಉದ್ಯೋಗದಲ್ಲಿ ಸಮಾನತೆ ಕಲ್ಪಿಸಲು ಸದಾಶಿವ ಆಯೋಗ ವರದಿ ನೀಡಿದೆ. ಇದರಿಂದ ಯಾವುದೇ ಜಾತಿಯನ್ನು ಹೊರಗಿಡುವುದಿಲ್ಲ. ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಚರ್ಚೆಯಾಗಿ ಸಂಸತ್ತಿಗೆ ಕಳುಹಿಸಲಾಗಿದೆ. ಸಮೀಕ್ಷೆಯಲ್ಲಿ ವ್ಯತ್ಯಾಸಗಳಿದ್ದಲ್ಲಿ ಪುನರ್ ಪರಿಶೀಲನೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷ ವೆಂಕಟಮುನಿಯಪ್ಪ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳಾದ ಕೆ.ವಿ.ಸುರೇಶ್‌ಕುಮಾರ್‌, ಎಸ್.ಮಂಜುನಾಥ್, ಎನ್.ರಾಜಣ್ಣ, ಉದಯಶಂಕರ್, ಪ್ರಸಾದ್‌ಬಾಬು, ಆಂಜನಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು