ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟೂರಿನಲ್ಲಿ ಗುರುರಾಜ್‌ಗೆ ಭವ್ಯ ಸ್ವಾಗತ

ಕುಂದಾಪುರದಿಂದ ಕೊಲ್ಲೂರಿನವರೆಗೂ ಮೆರವಣಿಗೆ
Last Updated 20 ಏಪ್ರಿಲ್ 2018, 10:26 IST
ಅಕ್ಷರ ಗಾತ್ರ

ಕುಂದಾಪುರ: ಈಚೆಗೆ ಆಸ್ಟೇಲಿಯಾದ ಗೋಲ್ಡ್‌‌ಕೋಸ್ಟ್‌ದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೊದಲ ದಿನ ನಡೆದ 56 ಕೆ.ಜಿ ವಿಭಾಗದ ಪುರುಷರ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಿ ಬೆಳ್ಳಿ ಪದಕ ಗಳಿಸುವ ಮೂಲಕ ಭಾರತದ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಜಡ್ಡಿನ ಗುರುರಾಜ್‌ ಪೂಜಾರಿ ಅವರನ್ನು ಗುರುವಾರ ಕುಂದಾಪುರದಲ್ಲಿ ಅದ್ಧೂರಿ ಆಗಿ ಸ್ವಾಗತ ಮಾಡಲಾಯಿತು.

ಮಧ್ಯಾಹ್ನ 2.30 ರ ಸುಮಾರಿಗೆ ಕುಂದಾಪುರಕ್ಕೆ ಬಂದ ಅವರನ್ನು ಅಲಂಕೃತವಾದ ತೆರೆದ ಜೀಪ್‌ನಲ್ಲಿ ಮೆರವಣಿಗೆಯ ಮೂಲಕ ಭವ್ಯವಾಗಿ ಸ್ವಾಗತಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಬ್ಯಾಂಡ್‌ ಸೆಟ್‌ ಹಾಗೂ ಜಯಕಾರಗಳೊಂದಿಗೆ ಅಭಿಮಾ
ನಿಗಳು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳು ಬೈಕ್‌ ಹಾಗೂ ವಾಹನ ರ‍್ಯಾಲಿ ನಡೆಸುವ ಮೂಲಕ ತಮ್ಮ ಸಂಭ್ರಮ ಹಂಚಿಕೊಂಡರು.

ಗುರುರಾಜ್‌ ವೇಟ್‌ ಲಿಫ್ಟಿಂಗ್‌ ಹಾಗೂ ದೇಹದಾರ್ಢ್ಯ ತರಬೇತಿ ಪಡೆದುಕೊಂಡಿದ್ದ ಕುಂದಾಪುರದ ನ್ಯೂ ಹರ್ಕೂಲೆಸ್‌ ಜಿಮ್‌ನಲ್ಲಿ ಅವರನ್ನು ಸಾರ್ವಜನಿಕವಾಗಿ ಅಭಿನಂದಿಸಲಾಯಿತು. ಕಂದಾಯ ಉಪವಿಭಾಗಾಧಿಕಾರಿ ಭೂಬಾಲನ್‌, ಜಿಲ್ಲಾ ಯುವ ಜನಸೇವಾ ಹಾಗೂ ಕ್ರೀಡಾ ನಿರ್ದೇಶಕ ಡಾ.ರೋಶನ್‌ ಕುಮಾರ ಶೆಟ್ಟಿ, ಪೊಲೀಸ್‌ ಠಾಣಾಧಿಕಾರಿ ಹರೀಶ್‌, ನ್ಯೂ ಹರ್ಕೂಲೆಸ್‌ ಜಿಮ್‌ ತರಬೇತುದಾರ ಸತೀಶ್‌ ಖಾರ್ವಿ, ಕೊಲ್ಲೂರು ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ಕ್ರೀಡಾ ನಿರ್ದೇಶಕ ಸುಕೇಶ್‌ ಶೆಟ್ಟಿ ಹೊಸ್ಮಠ, ಕ್ರೀಡಾ ಶಿಕ್ಷಕ ಸಚಿನ್‌ ಶೆಟ್ಟಿ ಹುಂಚನಿ ಹಾಗೂ ಗುರುರಾಜ್‌ ಅವರ ತಂದೆ ಮಹಾಬಲ ಪೂಜಾರಿ ಇದ್ದರು.

ನಗರದ ಶ್ರೀ ನಾರಾಯಣ ಗುರು ಕಲ್ಯಾಣ ಮಂದಿರದಲ್ಲಿ ಅವರನ್ನು ಸ್ವಾಗತಿಸಿಕೊಂಡ ತಾಲ್ಲೂಕು ಬಿಲ್ಲವ ಸೇವಾ ಸಮಾಜದ ಪದಾಧಿಕಾರಿಗಳು ಸಿದ್ದಿವಿನಾಯಕ ದೇವಸ್ಥಾನದಲ್ಲಿ ತಾಲ್ಲೂಕು ಬಿಲ್ಲವ ಸೇವಾ ಸಮಾಜದ ವತಿಯಿಂದ ಗೌರವಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜು ಬಿಲ್ಲವ ಕೋಟೇಶ್ವರ, ನಾರಾಯಣ ಬಿಲ್ಲವ, ಟಿ.ಕೆ.ಕೋಟ್ಯಾನ್‌, ಕೇಶವ ಸಸಿಹಿತ್ಲು, ಕಲ್ಪನಾ ಭಾಸ್ಕರ್‌, ಸುಮನಾ, ಬಿಲ್ಲವ ಯುವ ಮಂಡಳಿ ಅಧ್ಯಕ್ಷ ಅಶೋಕ್‌ ಪೂಜಾರಿ ಹಾಗೂ ಅಜಿತ್‌ ಪೂಜಾರಿ ಇದ್ದರು.

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಹಾಗೂ ಶಾಲಾ ಒಡನಾಡಿಗಳು ಗುರುರಾಜ್‌ ಅವರಿಗೆ ಅಭಿಮಾನದ ಸ್ವಾಗತ ನೀಡಿದರು. ಗುರುಗಳು, ಸ್ನೇಹಿತರು ಹಾಗೂ ಕುಟುಂಬಿಕರೊಂದಿಗೆ ಅವರು ಶ್ರೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಕುಂದಾಪುರ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಹೆಮ್ಮಾಡಿ ಮೂಲಕ ಕೊಲ್ಲೂರಿಗೆ ತೆರಳಿ ನಂತರ ಅವರ ಹುಟ್ಟೂರಾದ ಚಿತ್ತೂರು ಸಮೀಪದ ಜಡ್ಡಿನಲ್ಲಿ ಸಮಾಪ್ತಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT