ಮಂಗಳವಾರ, ಅಕ್ಟೋಬರ್ 22, 2019
25 °C

ಬಡವರ ಬಂಧು, ಕಾಯಕ ಯೋಜನೆಯ ಗುರಿ ಸಾಧನೆಗೆ ಸೂಚನೆ

Published:
Updated:
Prajavani

ಕೋಲಾರ: ‘ಬಡವರ ಬಂಧು ಹಾಗೂ ಕಾಯಕ ಯೋಜನೆಯಡಿ ಮೊದಲ ಹಂತದಲ್ಲಿ ನೀಡಿರುವ ಗುರಿ ಸಾಧನೆ ಮಾಡಬೇಕು’ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ನರಸಿಂಹಮೂರ್ತಿ ತಿಳಿಸಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಗಂಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆರ್ಥಿಕ ನೆರವು ಕಲ್ಪಿಸಲು ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದ್ದು, ಸಹಕಾರ ಬ್ಯಾಂಕ್‍ಗಳು ಅವರಿಗೆ ಸಾಲ ನೀಡಿದರೆ ಶೇ.100ರಷ್ಟು ಮರುಪಾವತಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೋಲಾರ–ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ರೈತರಿಗೆ, ಮಹಿಳೆಯರಿಗೆ ಸಾಲ ನೀಡಿ ನಂಬಿಕೆ ಉಳಿಸಿಕೊಂಡಿದೆ, ಇಲ್ಲಿನ ಜನ ವಾಣಿಜ್ಯ ಬ್ಯಾಂಕ್‌ಗಳ ಮೇಲಿನ ನಂಬಿಕೆ ಕಳೆದುಕೊಂಡಿದೆ. ಇಲ್ಲಿ ಪ್ರಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

‘ಕಾಯಕ ಬಂಧು ಯೋಜನೆಯಲ್ಲಿ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಹೈನುಗಾರಿಕೆ, ಗುಡಿ ಕೈಗಾರಿಕೆ ನಡೆಸುವವರಿಗೆ ಸಾಲ ನೀಡಬೇಕು. ಯೋಜನೆಗಳು ಕುರಿತು ಪ್ರಚಾರ ಮಾಡಿದರೆ ಸ್ವಯಂ ಪ್ರೇರಿತರಾಗಿ ಸಾಲ ಪಡೆದುಕೊಳ್ಳಲು ಮುಂದಾಗುತ್ತಾರೆ, ಆಗ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮಂಜೂರು ಮಾಡಬೇಕು’ ಎಂದು ಸಲಹೆ ನೀಡಿದರು.

‘ಕಾಯಕ ಯೋಜನೆಯಲ್ಲಿ 10 ಫಲಾನುಭವಿಗಳನ್ನು ಗುರುತಿಸಿ ಅವರು ಕೈಗೊಂಡಿರುವ ಉದ್ಯೋಗಕ್ಕೆ ಸಂಬಂಧಿಸಿದಂತೆ ₨ 5 ಲಕ್ಷತನಕ ಬಡ್ಡಿ ರಹಿತ ಸಾಲ ನೀಡಬಹದು. ಇದರ ಜತೆಗೆ ಹೆಚ್ಚಿಗೆ ಸಾಲ ಬೇಕಾದರೆ ಶೇ.3ರ ಬಡ್ಡಿದರದಲ್ಲಿ ನೀಡಬಹುದು’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ‘ಈಗಾಗಲೇ ಎರಡೂ ಜಿಲ್ಲೆಯ ಬೀದಿ ಬದಿ ವ್ಯಾಪಾರಸ್ಥರಿಗೆ ಶೂನ್ಯ ಬಡ್ಡಿದರದಲ್ಲಿ ₨ 10 ಸಾವಿರತನಕ ಸಾಲ ನೀಡಲಾಗಿದ್ದು, ಸಮರ್ಪಕವಾಗಿ ಮರುಪಾತಿ ಮಾಡಿ, ಮತ್ತೆ ಸಾಲಕ್ಕೆ ಬೇಡಿಕೆ ಇಟ್ಟಿದ್ದಾರೆ, ಈಗ 30 ಅರ್ಜಿಗಳು ಮಂಜೂರು ಹಂತದಲ್ಲಿದೆ’ ಎಂದು ತಿಳಿಸಿದರು.

‘ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ನೀಡುವ ಸಾಲದಲ್ಲಿ ಮಹಿಳೆಯರು ಹಸು ಖರೀದಿ ಮಾಡಿ ಜೀವನ ನಡೆಸುತ್ತಿದ್ದಾರೆ. ಗುಡಿ ಕೈಗಾರಿಕೆ ನಡೆಸುತ್ತಿರುವ ಮಹಿಳೆಯರಿಂದ ಅರ್ಜಿ ಸ್ವೀಕರಿಸಿ ಗುರಿ ಸಾಧನೆ ಮಾಡಲಾಗುವುದು. ಯೋಜನೆಗಳನ್ನು ಸಮರ್ಪವಾಗಿ ಅನುಷ್ಟಾನಗೊಳಿಸಲಾಗುವುದು. ಬಡವರಿಗೆ ಸಹಾಯ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

‘ಬಡವರ ಬಂಧು ಯೋಜನೆಯಲ್ಲಿ ವ್ಯಾಪಾರ ಮಾಡವ ಬಡವರನ್ನು ಗುರುತಿಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಬೈರೇಗೌಡ ನೇತೃತ್ವದಲ್ಲಿ ಸ್ಥಳೀಯವಾಗಿ ಪ್ರತಿ ತಾಲ್ಲೂಕಿನಲ್ಲಿ 25 ಗುಂಪುಗಳನ್ನು ಗುರುತಿಸಿ ಸಾಲ ನೀಡಲು ತಮ್ಮ ಕಡೆಯಿಂದ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ಸಹಕಾರದೊಂದಿಗೆ ಸೋಸೈಟಿಗಳಲ್ಲಿನ ವ್ಯಾವಹಾರವನ್ನು ಗಣಕೀಕರಣ ಮಾಡಲಾಗುವುದು. ಬ್ಯಾಂಕ್ಕ್‌ನಲ್ಲಿ ಮಂಜೂರಾತಿಗಾಗಿ ಸಿದ್ದವಿರುವ 30 ಪ್ರಕರಣಗಳಿಗೆ ₨ 3 ಲಕ್ಷ ಸಾಲ ನೀಡಲು ಸ್ಥಳದಲ್ಲಿ ಆದೇಶ ನೀಡಲಾಗುವುದು’ ಎಂದು ಹೇಳಿದರು.

ಸಹಕಾರ ಸಂಘಗಳ ಜಂಟಿ ನಿರ್ಬಂಧಕ ನರಸಿಂಹಮೂರ್ತಿ ಮಾತನಾಡಿ, ‘ಯೋಜನೆ ಜಾರಿಯಾಗುವ ಮೊದಲೇ ಬೀದಿ ವ್ಯಾಪಾರಸ್ಥರಿಗೆ ಸಾಲ ನೀಡಿರುವುದು ಶ್ಲಾಘನೀಯ, ಸಾಲ ಮಂಜೂರು ಮಾಡುವ ಮೊದಲು ಫಲಾನುಭವಿ ಅರ್ಹರ ಅಥವಾ ಅಲ್ಲವೊ ಎಂಬುದರ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ, ಎಜಿಎಂಗಳಾದ ಬೈರೇಗೌಡ, ನಾಗೇಶ್, ಶಿವಕುಮಾರ್ ಹಾಜರಿದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)