ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಸೂಚನೆ

ಕೋವಿಡ್–19: ಜಿಲ್ಲೆಯ ಸ್ಥಿತಿಗತಿ ಪರಿಶೀಲಿಸಿದ ಡಿಸಿಎಂ ಅಶ್ವತ್ಥನಾರಾಯಣ
Last Updated 1 ಜುಲೈ 2020, 17:45 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೋವಿಡ್–19 ಸ್ಥಿತಿಗತಿ ಸಂಬಂಧ ಉನ್ನತ ಅಧಿಕಾರಿಗಳ ಜತೆ ಬುಧವಾರ ಮಹತ್ವದ ಸಮಾಲೋಚನೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಕೊರತೆ ಇರುವ ವೈದ್ಯಕೀಯ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿ.ಪಂ ಸಿಇಒ ಎಚ್‌.ವಿ.ದರ್ಶನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಜತೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ‘ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದು, ಯಾವುದೇ ಕಠಿಣ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿರಬೇಕು’ ಎಂದು ಸೂಚಿಸಿದರು.

ಲ್ಲೆಯಲ್ಲಿರುವ ಕೊರೊನಾ ಸೋಂಕಿತರ ಪ್ರಮಾಣ, ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ, ಫೀವರ್ ಕ್ಲಿನಿಕ್‌ಗಳ ನಿರ್ವಹಣೆ, ಆಂಬುಲೆನ್ಸ್‌ ಸೌಲಭ್ಯ ಬಗ್ಗೆ ಅಧಿಕಾರಿಗಳು ಉಪ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

‘ಸದ್ಯ ಜಿಲ್ಲೆಯ ಆಸ್ಪತ್ರೆಗಳಲ್ಲಿ 600 ಹಾಸಿಗೆ ಸೌಲಭ್ಯವಿದೆ. ಕೇವಲ 34 ವೈದ್ಯರು ಹಾಗೂ 54 ನರ್ಸ್‌ಗಳು ಇದ್ದಾರೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ‘ಅಗತ್ಯವಿರುವ ವೈದ್ಯಕೀಯ ಸಿಬಂದಿಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ತಕ್ಷಣವೇ ನೇಮಕ ಮಾಡಿಕೊಳ್ಳಿ. ಜತೆಗೆ ಮೈಕ್ರೋ ಬಯಾಲಿಜಿಸ್ಟ್‌ಗಳನ್ನು ನೇಮಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಸಹಕಾರ ಸಿಗುತ್ತಿಲ್ಲ: ‘ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 1,150 ಹಾಸಿಗೆ ಸೌಲಭ್ಯವಿದೆ. ಆದರೆ, ಕೊರೊನಾ ಸೋಂಕಿತರ ಚಿಕಿತ್ಸೆ ವಿಚಾರದಲ್ಲಿ ಆಸ್ಪತ್ರೆ ಮಂಡಳಿಯಿಂದ ಜಿಲ್ಲಾಡಳಿತಕ್ಕೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ‘ಕೋವಿಡ್–19 ವಿಷಯದಲ್ಲಿ ಯಾವ ಆಸ್ಪತ್ರೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಜಾಲಪ್ಪ ಆಸ್ಪತ್ರೆ ಆಡಳಿತ ಮಂಡಳಿ ಜತೆ ಖುದ್ದು ಮಾತನಾಡಿ. ಅವರು ಕನಿಷ್ಠ 300 ಹಾಸಿಗೆ ಸೇವೆ ನೀಡಲೇಬೇಕು. ಇದಕ್ಕೆ ಒಪ್ಪದಿದ್ದರೆ ನಾನೇ ಆಡಳಿತ ಮಂಡಳಿ ಸದಸ್ಯರ ಜತೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

ಟ್ರೂನೆಟ್ ಯಂತ್ರ: ‘ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಟ್ರೂನೆಟ್ ಯಂತ್ರ ಅಳವಡಿಸಬೇಕು. ಇದಕ್ಕೆ ಅಗತ್ಯವಿರುವ ಹಣವನ್ನು ಜಿಲ್ಲೆಯ ಖನಿಜ ನಿಧಿಯಿಂದ ಬಳಸಿ. ಈ ಯಂತ್ರಗಳ ಪರಿಣಾಮಕಾರಿಯಾಗಿ ಬಳಕೆ ಆಗಬೇಕು’ ಎಂದು ಆದೇಶಿಸಿದರು.

‘ಸರ್ಕಾರಿ ಆಸ್ಪತ್ರೆ ವೈದ್ಯರು ಆನ್‌ಲೈನ್‌ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದೇ ರೀತಿ ಖಾಸಗಿ ಆಸ್ಪತ್ರೆ ವೈದ್ಯರು ಸೇವೆ ಸಲ್ಲಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ನಿಯಮದಂತೆ ವೈದ್ಯಕೀಯ ವೆಚ್ಚ ಪಾವತಿಸುತ್ತೇವೆ. ಪ್ರತಿಯೊಬ್ಬರು ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಬೇಕು. ಸದಾ ಎಚ್ಚರ ವಹಿಸಿ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT