ಮಂಗಳವಾರ, ಅಕ್ಟೋಬರ್ 27, 2020
22 °C

ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರ ಜನರ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಆಗಬೇಕು. ಜತೆಗೆ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಾಲ್ಲೂಕಿನ ಹರಟಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸಿ.ಆರ್‌.ಅಶೋಕ್ ಹೇಳಿದರು.

ಹರಟಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರಿಯಾ ಯೋಜನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯವಿರುವ ಕೃಷಿ, ತೋಟಗಾರಿಕೆ, ಜಾನುವಾರಗಳ ಶೆಡ್ ಸೇರಿದಂತೆ ಇತರೆ ಸೌಲಭ್ಯ ತಲುಪಿಸಿ. ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿ’ ಎಂದು ಸೂಚಿಸಿದರು.

‘ಪ್ರತಿ ಕಾಮಗಾರಿಯ ಅಂದಾಜು ವೆಚ್ಚ ಸೇರಿದಂತೆ ಬೇಡಿಕೆ ಪಟ್ಟಿ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ. ಜನರು ಸರ್ಕಾರಿ ಕಾರ್ಯದ ನೆರವಿಗೆ ಧಾವಿಸುವ ಮೂಲಕ ಸ್ವಯಂಸೇವಕರಾಗಿ ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು. ರೈತರು ಮತ್ತು ಕೃಷಿ ಕಾರ್ಮಿಕರು ಅಗತ್ಯಕ್ಕೆ ಅನುಗುಣವಾಗಿ ನರೇಗಾ ಯೋಜನೆಯಡಿ ಹೆಸರು ನೋಂದಾಯಿಸಿ ಸ್ವಉದ್ಯೋಗಿಗಳಾಗಬೇಕು’ ಎಂದು ಸಲಹೆ ನೀಡಿದರು.

‘ಶಾಲೆಗಳಿಗೆ ಲಭ್ಯ ಅನುದಾನದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಜತೆಗೆ ಕುಡಿಯುವ ನೀರು ಮತ್ತು ಕಾಂಪೌಂಡ್‌ ವ್ಯವಸ್ಥೆ ಮಾಡಬೇಕು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಕೋರಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್, ಗ್ರಾ.ಪಂ ಕಾರ್ಯದರ್ಶಿ ರತ್ನಮ್ಮ, ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.