ಶನಿವಾರ, ಜನವರಿ 28, 2023
20 °C
ಜಂಗಮಗುರ್ಜೇನಹಳ್ಳಿಯಲ್ಲಿ ಕಸದ ರಾಶಿ: ಮಾಲಿನ್ಯ ನಿಯಂತ್ರಣ ಮಂಡಳಿ ಆಕ್ಷೇಪ

ಕೋಲಾರ ನಗರಸಭೆಗೆ ನೋಟಿಸ್‌ ಜಾರಿ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಸುಗಟೂರು ಹೋಬಳಿಯ ಜಂಗಮಗುರ್ಜೇನಹಳ್ಳಿ ಸವೇ ನಂ.17ರ ಕೆರೆ ಅಂಗಳ ಸಮೀಪ ಕೋಲಾರ ನಗರಸಭೆ ಸೇರಿದಂತೆ ವಿವಿಧೆಡೆಯಿಂದ ತಂದು ತ್ಯಾಜ್ಯ ಸುರಿದಿರುವುದರಿಂದ ಕೆರೆಯ ನೀರು ಹಾಗೂ ಸುತ್ತಲಿನ ಪ್ರದೇಶದ ಅಂತರ್ಜಲ ಕಲುಷಿತಗೊಳ್ಳುತ್ತಿರುವುದು ಕಂಡುಬಂದಿದೆ.

ಈ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಕೋಲಾರ ನಗರಸಭೆಗೆ ನೋಟಿಸ್‌ ನೀಡಿದ್ದು, ‘ಅವೈಜ್ಞಾನಿಕವಾಗಿ ಹಾಗೂ ಅನಧಿಕೃತವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಕೆರೆ ಕಲುಷಿತಗೊಂಡಿರುವ ಬಗ್ಗೆ ಸ್ಥಳೀಯರು, ಹೋರಾಟಗಾರರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೀಡಿದ ದೂರಿನ ಮೇಲೆ ಈ ಕ್ರಮ ವಹಿಸಿದೆ. ಏಳು ದಿನಗಳೊಳಗೆ ನೋಟಿಸ್‌ಗೆ ಉತ್ತರಿಸಬೇಕೆಂದು ತಾಕೀತು ಮಾಡಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈಚೆಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದಾರೆ.

‘ಜಂಗಮಗುರ್ಜೇನಹಳ್ಳಿ ಕೆರೆಯಿಂದ ಸುಮಾರು 300 ಮೀಟರ್ ಅಂತರದಲ್ಲಿ ನಗರಸಭೆಯ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಹಾಕಿ ಸುತ್ತಲಿನ ಪರಿಸರವನ್ನು ಮಲಿನ ಮಾಡುತ್ತಿರುವುದನ್ನು ಗಮನಿಸಲಾಗಿದೆ. ಇದರಿಂದ ಅಂತರ್ಜಲ, ಮಣ್ಣು ಮತ್ತು ಇತರ ಮೂಲಗಳಿಗೆ ಕುತ್ತು ಉಂಟಾಗುವ ಸಂಭವ ಇರುತ್ತದೆ. ಇದು ಕಾನೂನು ಬಾಹಿರ’ ಎಂದು ಪರಿಸರ ಅಧಿಕಾರಿಯು ನಗರಸಭೆ ಪೌರಾಯುಕ್ತರಿಗೆ ಮನದಟ್ಟು ಮಾಡಿದ್ದಾರೆ.

‘ಕೆರೆ ಹತ್ತಿರದ ನಿವಾಸಿಗಳು ತಿಳಿಸಿರುವಂತೆ ನಗರಸಭೆಯ ಘನತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಹಾಕುತ್ತಿರುವುದರಿಂದ ನೊಣ, ಸೊಳ್ಳೆ, ನಾಯಿ ಹಾವಳಿ ಜೊತೆಗೆ ದುರ್ವಾಸನೆ ಬೀರುತ್ತಿದೆ. ಬಹಳ ತೊಂದರೆ ಉಂಟು ಮಾಡುತ್ತಿದೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಜಲ ಕಾಯ್ದೆ–1974 (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಹಾಗೂ ಘನತ್ಯಾಜ್ಯ ವಸ್ತುಗಳ ನಿಯಮ–2016 (ವ್ಯವಸ್ಥಾಪನೆ ಮತ್ತು ನಿರ್ವಹಣೆ) ಪ್ರಕಾರ ಉಲ್ಲಂಘನೆಯಾದ ಕಾರಣ ತಮ್ಮ ವಿರುದ್ಧ ಕ್ರಮ ಜರುಗಿಸಲು ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗಿದೆ’ ಎಂದಿದ್ದಾರೆ.

ತ್ಯಾಜ್ಯ ವಿಲೇವಾರಿ ನಿಲ್ಲಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾದ ಕಾರಣ ಈಚೆಗೆ ತಹಶೀಲ್ದಾರ್‌ ವಿ.ನಾಗರಾಜ್‌ ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.