ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಸೂಚನೆ

ಕೋವಿಡ್‌ ನಿಯಾಮವಳಿ ಉಲ್ಲಂಘನೆ: ಜಿ.ಪಂ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆ
Last Updated 31 ಜುಲೈ 2020, 15:08 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಕೈಗಾರಿಕೆಗಳಿಗೆ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ವಾಹನಗಳಲ್ಲಿ ಕರೆತರುವ ವೇಳೆ ಕೋವಿಡ್ ನಿಯಮಾವಳಿ ಉಲ್ಲಂಘಿಸುತ್ತಿರುವ ಬಗ್ಗೆ ದೂರು ಬಂದಿದ್ದು, ಅಂತಹ ಕೈಗಾರಿಕೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರು, ‘ಕೈಗಾರಿಕೆಗಳ ಮಾಲೀಕರಿಗೆ ಕೆಲಸಕ್ಕೆ ಕಾರ್ಮಿಕರು ಬೇಕು. ಆದರೆ, ಇವರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಕಾರ್ಮಿಕರನ್ನು ಕದ್ದುಮುಚ್ಚಿ ಸರಕು ಸಾಗಣೆ ವಾಹನಗಳಲ್ಲಿ ಕರೆತರಲಾಗುತ್ತಿದೆ. ಕೈಗಾರಿಕೆಗಳ ಈ ನಿರ್ಲಕ್ಷ್ಯವು ಕೊರೊನಾ ಸೋಂಕಿನ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತಿದೆ. ಕೈಗಾರಿಕೆಗಳು ಕಾರ್ಮಿಕರ ಜೀವದ ಜತೆ ಚೆಲ್ಲಾಟವಾಡುತ್ತಿವೆ’ ಎಂದು ಕಿಡಿಕಾರಿದರು.

‘ಒಂದು ವಾಹನದಲ್ಲಿ 25ಕ್ಕಿಂತ ಹೆಚ್ಚು ಕಾರ್ಮಿಕರನ್ನು ಕರೆದೊಯ್ಯುವಂತಿಲ್ಲ. ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಸೂಚಿಸಿ ಕೈಗಾರಿಕೆಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ, ಕೈಗಾರಿಕೆಗಳ ಮಾಲೀಕರು ಹಣ ಉಳಿಸುವ ಉದ್ದೇಶಕ್ಕೆ ಸರ್ಕಾರದ ನಿಯಮಾವಳಿ ಗಾಳಿಗೆ ತೂರುತ್ತಿದ್ದಾರೆ’ ಎಂದು ಸಮಿತಿ ಸದಸ್ಯ ಎಚ್.ವಿ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣ ದಾಖಲಿಸಿ: ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಪಾಲಿಸದ ಕೈಗಾರಿಕೆಗಳ ಮಾಲೀಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ. ಆಗ ಇತರೆ ಕೈಗಾರಿಕೆಗಳ ಮಾಲೀಕರು ತಪ್ಪು ಮಾಡುವುದಿಲ್ಲ’ ಎಂದು ಸಮಿತಿ ಸದಸ್ಯ ವಿ.ಎಸ್.ಅರವಿಂದ್‌ಕುಮಾರ್ ಒತ್ತಾಯಿಸಿದರು.

‘ಕಾರ್ಮಿಕರನ್ನು ಕರೆತರುವ ವಾಹನಗಳಲ್ಲಿ ಕೋವಿಡ್ ನಿಯಮ ಪಾಲಿಸದವರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ನೇರವಾಗಿ ಕ್ರಮ ಕೈಗೊಳ್ಳಲು ಆಗದಿದ್ದರೆ ಆರ್‌ಟಿಒ, ಪೊಲೀಸ್ ಹಾಗೂ ಸಂಬಂಧಪಟ್ಟ ತಾಲ್ಲೂಕು ತಹಸೀಲ್ದಾರ್‌ಗಳ ನೆರವು ಪಡೆಯಿರಿ’ ಎಂದು  ಸಲಹೆ ನೀಡಿದರು.

‘ಗ್ರಾಮೀಣ ಭಾಗದ ಬಡ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬರುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆ ವೈದ್ಯರು ಕೋವಿಡ್ ನೆಪದಲ್ಲಿ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿದರೆ ಅವರ ಪಾಡೇನು?’ ಎಂದು ಅಧ್ಯಕ್ಷರು ಪ್ರಶ್ನಿಸಿದರು.

ಕಾಮಗಾರಿ ಪೂರ್ಣಗೊಳಿಸಿ: ‘ಕೋವಿಡ್ ಕಾರ್ಯಪಡೆಗೆ ನಿಯೋಜನೆಗೊಂಡಿರುವ ಆಹಾರ ಇಲಾಖೆ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಔಷಧ ಮಾರಾಟ ಮಳಿಗೆಗಳಲ್ಲಿ ಅಕ್ರಮ ನಡೆಯುತ್ತಿರುವ ವಿಷಯ ತಿಳಿಸಿದರೂ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡುತ್ತಿಲ್ಲ’ ಎಂದು ದೂರಿದರು.

‘ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ಆಯುಷ್ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಸುಮಾರು ₹ 60 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕೆಲಸ ಬಾಕಿ ಉಳಿಯಲು ಕಾರಣವೇನು? ಗುತ್ತಿಗೆದಾರರಿಗೆ ಪಾವತಿಸಬೇಕಾದ ₹ 30 ಲಕ್ಷ ಬಿಡುಗಡೆಗೆ ಜಿ.ಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಕೊಡಿಸುತ್ತೇವೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ’ ಎಂದು ಸೂಚಿಸಿದರು.

ಮಾಹಿತಿ ನೀಡಿ: ‘ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಮತ್ತು ಖರ್ಚಿನ ಮಾಹಿತಿ ನೀಡಬೇಕು. ಈ ವರ್ಷ ಶಾಲೆಗಳು ತೆರೆಯುವುದು ಅನುಮಾನ. ಮಕ್ಕಳಿಗೆ ತೊಂದರೆಯಾಗದಂತೆ ಪಾಠ-ಪ್ರವಚನಕ್ಕೆ ಕ್ರಮ ಕೈಗೊಳ್ಳಿ’ ಎಂದುಅರವಿಂದ್‌ಕುಮಾರ್ ಹೇಳಿದರು.

ಸಮಿತಿ ಸದಸ್ಯೆ ರೂಪಶ್ರೀ, ಸದಸ್ಯ ಕಾರ್ಯದರ್ಶಿ ಸಿಎಂ.ಮುನಿಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT