ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಅಶೋಕನಗರ ರಸ್ತೆ ಕಟ್ಟಡ ತೆರವಿಗೆ ಸೂಚನೆ

Last Updated 25 ಸೆಪ್ಟೆಂಬರ್ 2020, 2:14 IST
ಅಕ್ಷರ ಗಾತ್ರ

ಕೆಜಿಎಫ್‌: ಸುಮಾರು ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುರುವಾರ ರಸ್ತೆ ವ್ಯಾಪ್ತಿಯ ಗುರುತು ಹಾಕಿದರು.

2013–14 ನೇ ಸಾಲಿನಲ್ಲಿ ಮಂಜೂರಾಗಿದ್ದ ಜೋಡಿ ರಸ್ತೆ ಕಾಮಗಾರಿ ಬಹುತೇಕ ಮುಗಿದಿದ್ದರೂ, 200 ಮೀಟರ್‌ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು. ರಸ್ತೆಯ ಎರಡೂ ಪಕ್ಕದ ಕಟ್ಟಡಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.ಇದರಿಂದ ₹ 3 ಕೋಟಿ ವೆಚ್ಚದ ಕಾಮಗಾರಿ ನ‌ನೆಗುದಿಗೆ ಬಿದ್ದಿತ್ತು.

ರಸ್ತೆ ವಿಸ್ತರಣೆ ಕಾಮಗಾರಿ ರಾಜಕೀಯವಾಗಿಯೂ ಪ್ರಾಮುಖ್ಯತೆ ಹೊಂದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದು, ಇದು ವಾಕ್ಸಮರಕ್ಕೂ ಕಾರಣವಾಗಿತ್ತು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್‌, ನಗರಸಭೆ ಆಯುಕ್ತ ಸಿ.ರಾಜು ಮತ್ತು ಸಿಬ್ಬಂದಿ ಪೊಲೀಸರ ರಕ್ಷಣೆಯೊಂದಿಗೆ ರಸ್ತೆ ಬದಿಯ ಕಟ್ಟಡಗಳ ವ್ಯಾಪ್ತಿಗೆ ಗುರುತು ಹಾಕಿದರು.

ಎಲ್ಲಾ ಕಟ್ಟಡ ಮಾಲೀಕರಿಗೂ ಕಟ್ಟಡ ಖಾಲಿ ಮಾಡುವಂತೆ ಸೂಚಿಸಿದರು. ಸೆ. 26ರಂದು ತೆರವು ಕಾರ್ಯಚರಣೆ ನಡೆಯಲಿದೆ. ಅಷ್ಟರೊಳಗೆ ಕಟ್ಟಡ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದರು.

ಅಧಿವೇಶನದ ನಂತರ ಚಾಲನೆ:

ರಸ್ತೆ ಕಾಮಗಾರಿಗೆ ಜಿಲ್ಲಾಧಿಕಾರಿ ಸಹಕಾರ ನೀಡುತ್ತಿಲ್ಲ ಎಂದು ಶಾಸಕಿ ಎಂ. ರೂಪಕಲಾ ಈಚೆಗೆ ಕೋಲಾರದ ಜಿಲ್ಲಾಧಿಕಾರಿ ಕಚೇರಿ ಎದುರು ನಾಲ್ಕು ಗಂಟೆಗಳ ಕಾಲ ಮಳೆಯಲ್ಲಿಯೇ ಒಬ್ಬಂಟಿಯಾಗಿ ನಿಂತು ಧರಣಿ ನಡೆಸಿದ್ದರು. ಆಗ ಜಿಲ್ಲಾಧಿಕಾರಿ ಮತ್ತು ಶಾಸಕಿಯ ನಡುವೆ ವಾಗ್ವಾದ ನಡೆದಿತ್ತು. ನಂತರ ಮಂಗಳವಾರ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ, ರಸ್ತೆ ವಿಸ್ತರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದಿದ್ದರು.

ಅಧಿವೇಶನ ಮುಗಿದ ನಂತರ ರಸ್ತೆ ವಿಸ್ತರಣೆ ಮಾಡುವುದಾಗಿ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT