ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆ ಹಂಚಿಕೆಯಲ್ಲಿ ಅಕ್ರಮದ ಆರೋಪ: ನಗರಸಭೆ ಮಾಜಿ ಅಧ್ಯಕ್ಷರಿಗೆ ನೋಟಿಸ್‌

ಮಳಿಗೆ ಹಂಚಿಕೆಯಲ್ಲಿ ಅಕ್ರಮದ ಆರೋಪ: ವಿಚಾರಣೆಗೆ ಹಾಜರಾಗಲು ಸೂಚನೆ
Last Updated 18 ಸೆಪ್ಟೆಂಬರ್ 2021, 14:45 IST
ಅಕ್ಷರ ಗಾತ್ರ

ಕೋಲಾರ: ಹರಾಜು ನಡೆಸದೆ ಶೇಕಡವಾರು ದರ ನಿಗದಿಪಡಿಸಿ ನಗರಸಭೆ ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿವರಣೆ ನೀಡುವಂತೆ ಉಪ ವಿಭಾಗಾಧಿಕಾರಿಯು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಎಂ.ಮುಬಾರಕ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಮುಬಾರಕ್‌ ಅವರು ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಳಿಗೆಗಳ ಹಂಚಿಕೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ನಗರಸಭೆ ಉಪಾಧ್ಯಕ್ಷ ಎನ್‌.ಎಸ್‌.ಪ್ರವೀಣ್‌ಗೌಡ ಅವರು ಆ.30ರಂದು ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದರು. ಈ ದೂರಿನ ಸಂಬಂಧ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯು ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್‌ ಮೀನಾ ಅವರಿಗೆ ಆದೇಶಿಸಿದ್ದರು.

ದೂರುದಾರರ ಆರೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಪತ್ರ ಹಾಗೂ ಮಾಹಿತಿಯೊಂದಿಗೆ ಸೆ.20ರಂದು ಮಧ್ಯಾಹ್ನ 12ಕ್ಕೆ ಖುದ್ದು ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಗೆ ಗೈರಾದರೆ ದೂರಿಗೆ ಸಂಬಂಧಿಸಿದಂತೆ ತಮ್ಮ ಸಮಜಾಯಿಷಿ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇನೆ ಎಂದು ಉಪ ವಿಭಾಗಾಧಿಕಾರಿಯು ನೋಟಿಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ದೂರು ಏನು?: ಮುಬಾರಕ್‌ ಅವರು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಳಿಗೆಗಳನ್ನು ಹರಾಜು ಮಾಡದೆ ಶೇಕಡವಾರು ದರ ನಿಗದಿಪಡಿಸಿ ಈ ಹಿಂದೆ ಕರಾರು ಮಾಡಿಕೊಂಡಿರುವ ಬಾಡಿಗೆದಾರರಲ್ಲದ ವ್ಯಕ್ತಿಗಳಿಗೆ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟು ಅಕ್ರಮ ಎಸಗಿದ್ದಾರೆ. ಸರ್ಕಾರದ ನಿಯಮಾವಳಿ, ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 72(2)ರ ಅನ್ವಯ ಕ್ರಮ ಕೈಗೊಳ್ಳದೆ ಮಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಪ್ರವೀಣ್‌ಗೌಡ ದೂರಿನಲ್ಲಿ ಆರೋಪಿಸಿದ್ದರು.

ಜಿಲ್ಲಾಧಿಕಾರಿ ಅಥವಾ ಸರ್ಕಾರದಿಂದ ಅನುಮತಿ ಪಡೆಯದೆ ಮಳಿಗೆ ಹಂಚಿಕೆ ಮಾಡಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಕಾಯ್ದೆ 1999ನ್ನು ಉಲ್ಲಂಘಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಂಚನೆಯಾಗಿದೆ. ಹೀಗಾಗಿ ಮುಬಾರಕ್‌ ಅವರ ವಿರುದ್ಧ ಕ್ರಮ ಜರುಗಿಸಿ, ನಗರಸಭೆಗೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕೆಂದು ದೂರುದಾರರು ಕೋರಿದ್ದರು.

‘ಉಪ ವಿಭಾಗಾಧಿಕಾರಿಯ ನೋಟಿಸ್‌ ಸ್ವೀಕರಿಸಿದ್ದೇನೆ. ಕಾನೂನು ಚೌಕಟ್ಟು ಮೀರಿ ಮಳಿಗೆಗಳನ್ನು ಹಂಚಿಕೆ ಮಾಡಿಲ್ಲ. ಈ ಸಂಬಂಧ ಸೆ.20ರಂದು ಖುದ್ದು ವಿಚಾರಣೆಗೆ ಹಾಜರಾಗಿ ದಾಖಲೆಪತ್ರಗಳ ಸಮೇತ ಉಪ ವಿಭಾಗಾಧಿಕಾರಿಗೆ ವಿವರಣೆ ನೀಡುತ್ತೇನೆ’ ಎಂದು ಮುಬಾರಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT