ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ಕೂಲಿ ಬೇಡಿಕೆ ಆಧಾರಿತ ಕಾರ್ಯಕ್ರಮ: ಗ್ರಾ.ಪಂ. ಅಧ್ಯಕ್ಷ ವೆಂಕಟೇಶಪ್ಪ

Last Updated 20 ಮಾರ್ಚ್ 2020, 12:30 IST
ಅಕ್ಷರ ಗಾತ್ರ

ಕೋಲಾರ: ‘ನರೇಗಾ ಯೋಜನೆಯಡಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ವೇತನ ದೊರೆಯಲಿದ್ದು, ಗ್ರಾಮೀಣ ಭಾಗದ ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ತಾಲ್ಲೂಕಿನ ಹರಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶಪ್ಪ ಕಿವಿಮಾತು ಹೇಳಿದರು.

ಹರಟಿ ಗ್ರಾ.ಪಂ ವತಿಯಿಂದ ಕೋಟಿಗಾನಹಳ್ಳಿ ಗ್ರಾಮದ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ನರೇಗಾ ಯೋಜನೆಯು ಕೂಲಿ ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 100 ದಿನ ಕೂಲಿ ಕೆಲಸ ನೀಡಲಾಗುತ್ತಿದೆ’ ಎಂದರು.

‘ಸತತ ಬರಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಹೀಗಾಗಿ ರೈತರಿಗೆ ಕೃಷಿ ನಿರ್ವಹಣೆ ಕಷ್ಟವಾಗಿದೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ರೈತರು ಹಾಗೂ ಕೃಷಿ ಕಾರ್ಮಿಕರು ಕೆಲಸಕ್ಕಾಗಿ ನಗರ ಪ್ರದೇಶಕ್ಕೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಳೆ ತಪ್ಪಿಸಲು ನರೇಗಾ ಅಡಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಗ್ರಾಮೀಣ ಭಾಗದ ರೈತರು ಹಾಗೂ ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗಬಾರದು ಎಂಬ ಉದ್ದೇಶಕ್ಕೆ ಸರ್ಕಾರ ನರೇಗಾ ಯೋಜನೆ ಜಾರಿಗೊಳಿಸಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗ್ರಾಮೀಣ ಜನರಿಗೆ ಯೋಜನೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹರಟಿ ಗ್ರಾ.ಪಂ ಸದಸ್ಯ ಕೆ.ವೈ.ಗಣೇಶಗೌಡ ತಿಳಿಸಿದರು.

ಡೋಲಾಯಮಾನ: ‘ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೃಷಿ ಪರಿಸ್ಥಿತಿ ಡೋಲಾಯಮಾನವಾಗಿದೆ. ಬೆಳೆ ಇಲ್ಲದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜತೆಗೆ ಅವರ ಆದಾಯ ಕುಸಿದಿದ್ದು, ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಹೀಗಾಗಿ ಸರ್ಕಾರ ನರೇಗಾ ಯೋಜನೆಯಡಿ ರೈತರಿಗೆ ಕಲ್ಪಿಸಿಕೊಟ್ಟು ದಿನಕ್ಕೆ ₹ 249 ಕೂಲಿ ನೀಡುತ್ತಿದೆ’ ಎಂದು ಮಾಹಿತಿ ನೀಡಿದರು.

‘ನರೇಗಾ ಯೋಜನೆಯಡಿ ಹಳ್ಳಿಗಳಲ್ಲಿ ಕೆರೆ, ಗೋಕುಂಟೆಗಳಲ್ಲಿ ಹೂಳು ಎತ್ತಲಾಗುತ್ತದೆ. ಕೊಳವೆ ಬಾವಿ ಮರುಪೂರಣ, ಮೈದಾನ, ಕಣ, ಚೆಕ್‌ಡ್ಯಾಂ, ತೋಟಗಳಿಗೆ ಹೋಗಲು ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಸ್ಮಶಾನ ಅಭಿವೃದ್ಧಿ, ಉದ್ಯಾನ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದೆ’ ಎಂದರು.

‘ನರೇಗಾ ಬಗ್ಗೆ ಜನರಿಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಲಾಗುತ್ತಿದೆ. ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಗ್ರಾ.ಪಂ ವತಿಯಿಂದ ಉಚಿತವಾಗಿ ಉದ್ಯೋಗ ಕಾರ್ಡ್ ನೀಡಲಾಗುತ್ತದೆ. ಗ್ರಾಮದಲ್ಲಿ ಕೆಲಸ ಬೇಕೆಂದು ಅರ್ಜಿ ಸಲ್ಲಿಸಿದರೆ ತಿಂಗಳಿಗೆ ಕನಿಷ್ಠ 15 ದಿನ ಕೆಲಸ ನೀಡಲಾಗುತ್ತದೆ. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ಪಡೆಯುವ ಅವಕಾಶವಿದೆ. ವೈಯಕ್ತಿಕ ಫಲಾನುಭವಿಗಳು ವರ್ಷದಲ್ಲಿ ಗರಿಷ್ಠ ₹ 2 ಲಕ್ಷದವರಿಗೆ ಸಹಾಯಧನ ಪಡೆಯಬಹುದು’ ಎಂದು ವಿವರಿಸಿದರು.

‘ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಯೋಜನೆಯಡಿ ಅನೇಕ ಕಾಮಗಾರಿ ಅನುಷ್ಠಾನಕ್ಕೆ ಅವಕಾಶವಿದೆ. ರೈತರು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ವರ್ಷಕ್ಕೆ ಪ್ರತಿ ಕುಟುಂಬಕ್ಕೆ ಯೋಜನೆಯಡಿ 100 ದಿನಗಳ ಉದ್ಯೋಗ ನೀಡಲಾಗುತ್ತದೆ’ ಎಂದು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ಗ್ರಾಮಸ್ಥರಾದ ರವಿ, ರಾಮಣ್ಣ, ಮುನಿವೆಂಕಟಪ್ಪ, ಜಯರಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT