ಸೋಮವಾರ, ಫೆಬ್ರವರಿ 17, 2020
17 °C

ಫೆ.16ಕ್ಕೆ ಅಸಂಖ್ಯ ಪ್ರಮಥ ಗಣಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಬೆಂಗಳೂರಿನಲ್ಲಿ ಫೆ.16ರಂದು ಹಮ್ಮಿಕೊಂಡಿರುವ ಶಿವಯೋಗ ಸಂಭ್ರಮದ ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವ ಶರಣ ಸಮ್ಮೇಳನಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ಬೆಂಬಲ ನೀಡಲಾಗುವುದು’ ಎಂದು ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನವು ಬೆಂಗಳೂರಿನ ನಂದಿ ಗ್ರೌಂಡ್ಸ್‌ನಲ್ಲಿ ನಡೆಯಲಿದ್ದು, ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘೧೨ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಮಥ ಗಣಮೇಳ ಆಯೋಜಿಸುವ ಮೂಲಕ ಸಮಾನತೆಯ ಸಂದೇಶವನ್ನು ಸಾರಿದ್ದರು. ಕಲ್ಯಾಣ ಕ್ರಾಂತಿ ಮೂಲಕ ಜಾತಿರಹಿತ ಮತ್ತು ವರ್ಗರಹಿತ ಸಮಾಜ ನಿರ್ಮಾಣದ ಉದ್ದೇಶ ಬಸವಣ್ಣನವರದ್ದಾಗಿತ್ತು. ಅದೇ ಹಾದಿಯಲ್ಲಿ ಸಾಗುತ್ತಿರುವ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಮಹಾಶರಣರ ನೇತೃತ್ವದಲ್ಲಿ ಗಣಮೇಳ ನಡೆಯಲಿದೆ’ ಎಂದು ಹೇಳಿದರು.

‘ಮುರುಘಾ ಮಠದಲ್ಲಿ ಪ್ರತಿ ತಿಂಗಳ ೫ ರಂದು ಅಂತರ್ಜಾತಿಯ, ವಿಧವಾ ವಿವಾಹಗಳು ನಡೆಯುತ್ತಿವೆ. ಅಕ್ಷರ, ಅನ್ನ, ಆಶ್ರಯ ಸೇರಿದಂತೆ ತ್ರಿವಿಧ ದಾಸೋಹಗಳು ನಿರಂತರವಾಗಿ ನಡೆಯುತ್ತಿದೆ. ಮಾನವತವಾದ ಪ್ರತಿಬಿಂಬಿಸುತ್ತಿರುವ ಮುರುಘಾಮಠದ ಶರಣರಿಗೆ ರಾಜ್ಯದ ಎಲ್ಲ ದಲಿತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ’ ಎಂದರು.

‘ಬಸವ ಕೇಂದ್ರಗಳು, ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಸರ್ವಜನಾಂಗದ ಮಠಾಧೀಶರು ಸೇರಿ ೩ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ರಾಜ್ಯದಲ್ಲಿ ಜಾರಿಯಲ್ಲಿರುವ ಭೂಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಲೋಪಗಳಿಂದ ದಲಿತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಕಾಯ್ದೆಗೆ ಸಮಗ್ರ ತಿದ್ದುಪಡಿಗಾಗಿ ಒಕ್ಕೂಟವು ಹಲವು ಹೋರಾಟ ನಡೆಸುತ್ತಾ ಬಂದಿದೆ. ಒಕ್ಕೂಟವೇ ತಿದ್ದುಪಡಿ ಮಸೂದೆಯ ಕರಡು ಸಿದ್ದಪಡಿಸಿದ್ದು, ಯಥಾವತ್‌ ಅಗಿ ಮಂಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು’ ಎಂದು ವಿವರಿಸಿದರು.

ದಲಿತ ಸಿಂಹ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಬಾಬು, ರಾಜ್ಯ ಯುವ ಘಟಕದ ಅಧ್ಯಕ್ಷ ಅಂಬರೀಷ್, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಬ್ಯಾಟಪ್ಪ, ದಲಿತ ಸಿಂಹ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು