ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು– ಕಟ್ಟಡ ಮಾಲೀಕರ ವಾಗ್ವಾದ

ರಸ್ತೆ ವಿಸ್ತರಣೆ ಕಾಮಗಾರಿ: ಕಟ್ಟಡ ಗುರುತು ಕಾರ್ಯಕ್ಕೆ ಅಡ್ಡಿ
Last Updated 4 ಅಕ್ಟೋಬರ್ 2020, 16:10 IST
ಅಕ್ಷರ ಗಾತ್ರ

ಕೋಲಾರ: ನಗರದ ಕ್ಲಾಕ್‌ ಟವರ್‌ನಿಂದ ಬಂಗಾರಪೇಟೆ ವೃತ್ತದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ತೆರವುಗೊಳಿಸಲು ಉದ್ದೇಶಿಸಿರುವ ಕಟ್ಟಡಗಳನ್ನು ಗುರುತು ಮಾಡಲು ಮುಂದಾದ ಅಧಿಕಾರಿಗಳ ಜತೆ ಕಟ್ಟಡ ಮಾಲೀಕರು ವಾಗ್ವಾದ ನಡೆಸಿದ್ದರಿಂದ ಭಾನುವಾರ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಡೂಂಲೈಟ್‌ ವೃತ್ತದ ಬಳಿ ರಸ್ತೆಯ ಮಧ್ಯ ಭಾಗದಿಂದ ಅಳತೆ ಮಾಡಿ ತೆರವುಗೊಳಿಸಬೇಕಾದ ಕಟ್ಟಡ ಹಾಗೂ ಮರಗಳಿಗೆ ಗುರುತು ಹಾಕಲು ಮುಂದಾದರು.

ಇದರಿಂದ ಆಕ್ರೋಶಗೊಂಡ ಕಟ್ಟಡ ಮಾಲೀಕ ಪ್ರಸನ್ನ ಎಂಬುವರು, ‘ಈ ಹಿಂದೆ ರಸ್ತೆ ವಿಸ್ತರಣೆಗೆ ಕಡಿಮೆ ವಿಸ್ತೀರ್ಣವಿತ್ತು. ಆದರೆ, ಈಗ ಹೆಚ್ಚು ವಿಸ್ತೀರ್ಣ ಗುರುತು ಮಾಡಲಾಗಿದೆ. ಕಟ್ಟಡ ತೆರವುಗೊಳಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ. ಆದರೂ ಏಕೆ ಕಟ್ಟಡ ತೆರವಿಗೆ ಅಳತೆ ಮಾಡುತ್ತಿದ್ದೀರಿ?’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ರಸ್ತೆ ವಿಸ್ತರಣೆಯಿಂದ ಮನೆ ಮತ್ತು ಕಟ್ಟಡ ಕಳೆದುಕೊಳ್ಳುವವರಲ್ಲಿ ಬಹುಪಾಲು ಮಂದಿ ಬಡವರಾಗಿದ್ದಾರೆ. ಆದ ಕಾರಣ ಪರಿಹಾರ ಕೊಡಬೇಕು. ಮನೆ ಮತ್ತು ಕಟ್ಟಡ ತೆರವು ಮಾಡಿದರೆ ನಾವು ಬೀದಿ ಪಾಲಾಗುತ್ತೇವೆ. ನಂತರ ಜೀವನ ನಿರ್ವಹಣೆಗೆ ಏನು ಮಾಡುವುದು?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ರಸ್ತೆ ವಿಸ್ತರಣೆಗೆ ನಗರದ ಸಾಕಷ್ಟು ಕಡೆ ಜಾಗ ಗುರುತಿಸಿ ಕಟ್ಟಡ ಮತ್ತು ಮರಗಳನ್ನು ತೆರವು ಮಾಡಿದ್ದೇವೆ. ಕಾಮಗಾರಿಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಮನೆ ಅಥವಾ ಅಂಗಡಿ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ರಸ್ತೆ ವಿಸ್ತರಣೆಯಾದರೆ ಜನತೆಗೆ ಅನುಕೂಲವಾಗುತ್ತದೆ. ಆದ ಕಾರಣ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಅನುದಾನ ಬಳಕೆ: ‘ನಗರದ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಇದನ್ನು ಸಮರ್ಪಕವಾಗಿ ಬಳಸಬೇಕು. ನಗರದ ಎಲ್ಲಾ ರಸ್ತೆಗಳ ವಿಸ್ತರಣೆ ಆಗುತ್ತಿದೆ. ಕಾಮಗಾರಿಗಾಗಿ ಹಲವು ದೇವಸ್ಥಾನ ಮತ್ತು ಕಟ್ಟಡಗಳನ್ನು ತೆರವು ಮಾಡಲಾಗಿದೆ. ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆ ಮತ್ತು ಪ್ರವಾಸಿಮಂದಿರದ ತಡೆಗೋಡೆ (ಕಾಂಪೌಂಡ್‌) ಸಹ ತೆರವು ಮಾಡಿದ್ದೇವೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಹೇಳಿದರು.

ನಗರೋತ್ಥಾನ ಮತ್ತು ಅಮೃತ್‌ಸಿಟಿ ಯೋಜನೆಯಲ್ಲಿ ನಗರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸರ್ಕಾರದ ಅನುದಾನ ಬಳಸಿಕೊಂಡು ನಗರವನ್ನು ಮತ್ತಷ್ಟು ಸುಂದರವಾಗಿಸುವುದು ನಮ್ಮ ಜವಾಬ್ದಾರಿ. ಸಾರ್ವಜನಿಕರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸದೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಆಯುಕ್ತರ ಮನವಿಗೂ ಸ್ಪಂದಿಸದ ಕೆಲ ಕಟ್ಟಡ ಮಾಲೀಕರು ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದರು. ಇದರಿಂದ ಅಧಿಕಾರಿಗಳು ಮತ್ತು ಕಟ್ಟಡ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT