ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದುರಾಳಿ ಶಾಸಕರಿಂದ ತೊಂದರೆ

ಸಭೆಯಲ್ಲಿ ವರ್ತೂರು ಪ್ರಕಾಶ್‌ ಬಣದ ಜಿ.ಪಂ ಸದಸ್ಯರ ಅಳಲು
Last Updated 22 ಜುಲೈ 2019, 19:34 IST
ಅಕ್ಷರ ಗಾತ್ರ

ಕೋಲಾರ: ‘ನಮ್ಮ ಪರವಾದ ಶಾಸಕರಿಲ್ಲ. ಹೀಗಾಗಿ ಎದುರಾಳಿ ಶಾಸಕರು ನಮಗೆ ತೊಂದರೆ ಕೊಡುತ್ತಾರೆ. ಕ್ಷೇತ್ರದಲ್ಲಿ ಕುಡಿಯುವ ನೀರಿನಿಂದ ಹಿಡಿದು ಯಾವ ಕೆಲಸವೂ ಆಗುತ್ತಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳೋಣ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಬಣದ ಜಿಲ್ಲಾ ಪಂಚಾಯಿತಿ ಸದಸ್ಯರು ಅಲವತ್ತುಕೊಂಡರು.

2019–20ನೇ ಸಾಲಿನಲ್ಲಿ ಜಿ.ಪಂಗೆ ಹಂಚಿಕೆಯಾಗಿರುವ ಅನುದಾನ ಆಧರಿಸಿ ತಯಾರಿಸಿರುವ ಕರಡು ಕ್ರಿಯಾ ಯೋಜನೆ ಕುರಿತು ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ವರ್ತೂರು ಪ್ರಕಾಶ್‌ ಬಣದ ಸದಸ್ಯರಾದ ರೂಪಶ್ರೀ, ಸಿ.ಎಸ್‌.ವೆಂಕಟೇಶ್‌, ಅರುಣ್‌ಪ್ರಸಾದ್‌ ಅವರು, ‘ನಾವು ನಾಮಕಾವಸ್ಥೆಗೆ ಜಿ.ಪಂ ಸದಸ್ಯರಾಗಿದ್ದೇವೆ. ಅಧಿಕಾರಿಗಳು ನಮ್ಮ ಮಾತಿಗೆ ಕಿವಿಗೂಡುತ್ತಿಲ್ಲ’ ಎಂದರು.

‘ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನಾವು ಗ್ರಾಮೀಣ ಪ್ರದೇಶದಿಂದ ಗೆದ್ದು ಬಂದವರು. ಅಲ್ಲಿನ ಜನರಿಗೆ ಮೂಲಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ. ಜನರಿಗೆ ಕನಿಷ್ಠ ಕುಡಿಯುವ ನೀರು ಕೊಡದಿದ್ದರೆ ನಾವು ಸದಸ್ಯರಾಗಿದ್ದು ಏನು ಪ್ರಯೋಜನ? ಅಧಿಕಾರಿಗಳು ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ಕನಿಷ್ಠ ಕರೆ ಸ್ವೀಕರಿಸಿ ಮಾತನಾಡುವ ಸೌಜನ್ಯವೂ ಅಧಿಕಾರಿಗಳಿಗಿಲ್ಲ’ ಎಂದು ಅರುಣ್‌ಕುಮಾರ್ ಮತ್ತು ರೂಪಶ್ರೀ ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ನಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸದ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಜಿ.ಪಂ ಎದುರು ಧರಣಿ ನಡೆಸುತ್ತೇವೆ’ ಎಂದು ರೂಪಶ್ರೀ ಎಚ್ಚರಿಕೆ ನೀಡಿದರು.

‘ನಮ್ಮ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಬಾರದು. ಕ್ಷೇತ್ರಕ್ಕೆ ಮೀಸಲಾದ ಅನುದಾನವನ್ನು ಶಾಸಕರಿಗೆ ಹಂಚಿಕೆ ಮಾಡಿದರೆ ನಮ್ಮ ಗತಿ ಏನು?’ ಎಂದು ವೆಂಕಟೇಶ್ ಪ್ರಶ್ನಿಸಿದರು.

ನಿರ್ಲಕ್ಷ್ಯ ಮಾಡಬಾರದು: ‘ಅಧಿಕಾರಿಗಳು ಯಾವುದೇ ಕಾರಣಕ್ಕೂ ಸದಸ್ಯರನ್ನು ನಿರ್ಲಕ್ಷ್ಯ ಮಾಡಬಾರದು. ಸದಸ್ಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರಿಯಾಯೋಜನೆ ಸಿದ್ಧಪಡಿಸುವದಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಜಿ.ಪಂ ಅಧ್ಯಕ್ಷ ಗೀತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಯೋಜನಾಧಿಕಾರಿ ಮಾದೇಶ್ ಅವರಿಂದಾಗಿ ಜಿ.ಪಂ ಇಬ್ಭಾಗವಾಗಿದೆ. ಸದಸ್ಯರಲ್ಲಿ ಆಗಿರುವ ಎರಡು ಗುಂಪುಗಳಿಗೆ ಯೋಜನಾಧಿಕಾರಿಯೇ ಮುಖ್ಯ ಕಾರಣ. ಜಿ.ಪಂನಲ್ಲಿ 30 ಸದಸ್ಯರಿದ್ದು, ಸಭೆಗೆ 12 ಮಂದಿ ಮಾತ್ರ ಹಾಜರಾಗಲು ಯೋಜನಾಧಿಕಾರಿಯೇ ಕಾರಣ. ಉಪಾಧ್ಯಕ್ಷೆ ಯಶೋಧಾ ಅವರು ಸಹ ಸಭೆಗೆ ಬಂದಿಲ್ಲ’ ಎಂದು ಸದಸ್ಯ ಅರವಿಂದ್ ಗಂಭೀರ ಆರೋಪ ಮಾಡಿದರು.

‘ಯೋಜನಾಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಕ್ರಿಯಾಯೋಜನೆ ಪಟ್ಟಿ ಸಿದ್ಧಪಡಿಸುವಾಗ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ಯಾವುದೇ ಯೋಜನೆಗಳನ್ನು ನಮ್ಮ ಗಮನಕ್ಕೆ ತರುವುದಿಲ್ಲ. ಕಾರ್ಯಕ್ರಮ ರೂಪಿಸುವಾಗಲೂ ಶಿಷ್ಟಾಚಾರ ಪಾಲಿಸುವುದಿಲ್ಲ’ ಎಂದು ಕಿಡಿಕಾರಿದರು.

ಮಾಹಿತಿ ಕೊಟ್ಟಿಲ್ಲ: ‘ಭೂಸೇನಾ ನಿಗಮದಲ್ಲಿ ಏನು ಕೆಲಸವಾಗುತ್ತಿದೆ ಎಂಬ ಬಗ್ಗೆ ನಮಗೆ ಮಾಹಿತಿಯೇ ಸಿಗುತ್ತಿಲ್ಲ, ಗ್ರಾಮ ವಿಕಾಸ ಯೋಜನೆಯಲ್ಲಿ ಕೋಲಾರ ತಾಲ್ಲೂಕಿನ ಅರಹಳ್ಳಿ ಗ್ರಾಮದಲ್ಲಿ ₹ 1 ಕೋಟಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಬಗ್ಗೆ ನಮಗೆ ಈವರೆಗೂ ಮಾಹಿತಿ ಕೊಟ್ಟಿಲ್ಲ’ ಎಂದು ಅರುಣ್‌ಪ್ರಸಾದ್ ದೂರಿದರು.

‘ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗುತ್ತಿವೆ. ಜನರಿಂದ ನೀರಿಗಾಗಿ ವಸೂಲಿ ಮಾಡಿದ ಹಣವನ್ನು ಘಟಕಗಳ ದುರಸ್ತಿಗೆ ಬಳಸುತ್ತಿಲ್ಲ. ಅಧಿಕಾರಿಗಳು ಈ ಹಣವನ್ನು ತಿಂದು ತೇಗುತ್ತಿದ್ದಾರೆಯೇ ಹೊರತು ನೀರಿನ ಘಟಕಗಳನ್ನು ರಿಪೇರಿ ಮಾಡುತ್ತಿಲ್ಲ. ನೀರಿನ ಘಟಕಗಳಲ್ಲಿ ನಾಣ್ಯ ಬಳಕೆ ತಪ್ಪಿಸಿ ಕಾರ್ಡ್ ಪದ್ಧತಿ ಅಳವಡಿಸಿದರೆ ಅಕ್ರಮ ತಪ್ಪಿಸಬಹುದು’ ಎಂದರು.

ಸದಸ್ಯರ ಪತ್ರ ಪಡೆಯಿರಿ: ಸದಸ್ಯರ ದೂರು ಆಲಿಸಿದ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌, ‘ಜಿ.ಪಂ ಕಾರ್ಯಕ್ರಮಗಳಿಗೆ ಹಂಚಿಕೆಯಾಗಿರುವ ಅನುದಾನದ ಕರಡು ಕ್ರಿಯಾಯೋಜನೆ ಪಟ್ಟಿ ತಯಾರಿಸುವಾಗ ಸದಸ್ಯರಿಂದ ಪತ್ರ ಪಡೆದು ಹಂಚಿಕೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸರ್ಕಾರದಿಂದ ಜಿ.ಪಂಗೆ ಒದಗಿಸಿರುವ ಹಣಕ್ಕೆ ಸದಸ್ಯರಿಂದಲೇ ಕ್ರಿಯಾಯೋಜನೆ ರೂಪಿತವಾಗಬೇಕು. ಅದು ಜಿ.ಪಂನಿಂದ ಆಗಬೇಕಾದ ಕಾಮಗಾರಿಗಳು. ಹೀಗಾಗಿ ಸದಸ್ಯರಿಂದ ತಾಲ್ಲೂಕುವಾರು ಪತ್ರ ತೆಗೆದುಕೊಂಡು ಕ್ರಿಯಾಯೋಜನೆ ಪಟ್ಟಿಯನ್ನು ತಯಾರಿಸಿ. ಬಳಿಕ ಜಿ.ಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಬೇಕು’ ಎಂದು ತಿಳಿಸಿದರು.

ಜಿ.ಪಂ ಕಾರ್ಯಕ್ರಮಗಳಿಗೆ ಹಂಚಿಕೆಯಾಗಿರುವ ₹ 233 ಕೋಟಿ ಅನುದಾನಕ್ಕೆ ಸದಸ್ಯರಿಂದ ಪತ್ರ ಪಡೆದು ವಿವಿಧ ಇಲಾಖೆಗಳಿಗೆ ಒದಗಿಸಿರುವ ಕಾಮಗಾರಿಗಳ ಕರಡು ಕ್ರಿಯಾಯೋಜನೆ ಪಟ್ಟಿ ಸಿದ್ಧಪಡಿಸಿ ಜಿ.ಪಂ ಸಾಮಾನ್ಯ ಸಭೆಯಲ್ಲಿ ಮಂಡನೆ ಮಾಡಲು ತೀರ್ಮಾನಿಸಲಾಯಿತು. ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT