ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ಜಿಲ್ಲೆ ಒಂದು ಉತ್ಪನ್ನ’: ಟೊಮೆಟೊ ಆಯ್ಕೆ

ಕೇಂದ್ರ ಸರ್ಕಾರದ ಪಿಎಂಎಫ್‍ಎಂಇ ಯೋಜನೆ ಜಿಲ್ಲೆಗೆ ವರದಾನ
Last Updated 11 ಫೆಬ್ರುವರಿ 2021, 12:39 IST
ಅಕ್ಷರ ಗಾತ್ರ

ಕೋಲಾರ: ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (ಪಿಎಂಎಫ್‍ಎಂಇ) ಜಾರಿಗೊಳಿಸಿದ್ದು, ಈ ಯೋಜನೆಯಡಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಆಧಾರದಲ್ಲಿ ಜಿಲ್ಲೆಯ ಉತ್ಪನ್ನವಾಗಿ ಟೊಮೆಟೊ ಬೆಳೆಗೆ ಅನುಮೋದನೆ ದೊರೆತಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಸುಮಾರು 8,800 ಹೆಕ್ಟೇರ್‌ ಟೊಮೆಟೊ ಬೆಳೆಯಿದೆ. ವರ್ಷಕ್ಕೆ 5 ಲಕ್ಷ ಮೆಟ್ರಿಕ್‌ ಟನ್‌ ಟೊಮೆಟೊ ಉತ್ಪಾದನೆಯಾಗುತ್ತಿದ್ದು, ಜಿಲ್ಲೆಯಿಂದ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ಟೊಮೆಟೊ ರಫ್ತಾಗುತ್ತದೆ.

ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ ₹ 200 ಕೋಟಿಗೂ ಹೆಚ್ಚು ಟೊಮೆಟೊ ವಹಿವಾಟು ನಡೆಯತ್ತದೆ. ಜಿಲ್ಲೆಗೆ ಸಾಕಾಗುವಷ್ಟು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಬೇಡಿಕೆ ಪೂರೈಸುವಷ್ಟು ಟೊಮೆಟೊ ಉತ್ಪನ್ನ ಲಭ್ಯವಿರುವುದರಿಂದ ತೋಟಗಾರಿಕೆ ಇಲಾಖೆಯು ಪಿಎಂಎಫ್‍ಎಂಇ ಯೋಜನೆಯಡಿ ಟೊಮೆಟೊ ಮೌಲ್ಯವರ್ಧನೆಗೆ ಮುಂದಾಗಿದೆ.

ಟೊಮೆಟೊ ಸಂಸ್ಕರಣೆಯಲ್ಲಿ ಹಾಲಿ ಇರುವ ಸಂಸ್ಕರಣಾ ಘಟಕಗಳಿಗೆ ಟೊಮೆಟೊ ಶೇಖರಣೆ, ವರ್ಗೀಕರಣ, ಶ್ರೇಣೀಕರಣ, ಬ್ರ್ಯಾಂಡಿಂಗ್, ಲೇಬಲಿಂಗ್, ಮಾರುಕಟ್ಟೆ ಬೆಂಬಲ, ಹೊಸ ಪ್ರಯೋಗಾಲಯಗಳ ಸ್ಥಾಪನೆ ಮತ್ತು ರಫ್ತಿಗೆ ಉತ್ತೇಜನ ನೀಡುವ ಮೂಲಕ ಘಟಕಗಳನ್ನು ನಿಯಮಬದ್ಧಗೊಳಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಬೆಳೆಗಾರರಿಗೆ ವರದಾನ: ಜಿಲ್ಲೆಯಲ್ಲಿ ಟೊಮೆಟೊ ಮೌಲ್ಯವರ್ಧನೆ ಆರಂಭಗೊಂಡರೆ ಬೇಡಿಕೆ ಹೆಚ್ಚಲಿದೆ. ಟೊಮೆಟೊ ಉಪ ಉತ್ಪನ್ನಗಳಾದ ಸಾಸ್‌, ಕೆಚಪ್‌, ಚಟ್ನಿ, ಸೂಪ್‌, ಪ್ಯೂರಿ, ಜ್ಯೂಸ್‌, ಜಾಮ್‌, ಉಪ್ಪಿನಕಾಯಿ ಉತ್ಪಾದನೆ ಆರಂಭವಾಗುತ್ತದೆ. ಇದು ಟೊಮೆಟೊ ಬೆಳೆಗಾರರಿಗೆ ವರದಾನವಾಗುವುದರ ಜತೆಗೆ ಕಿರು ಉದ್ಯಮಗಳ ಬೆಳವಣಿಗೆಗೆ, ಉದ್ಯೋಗಾವಕಾಶ ಸೃಷ್ಟಿಗೆ ಕಾರಣವಾಗಲಿದೆ.

ಪಿಎಂಎಫ್‍ಎಂಇ ಯೋಜನೆಯು 2024–25ರವರೆಗೆ ಅನುಷ್ಠಾನಗೊಳ್ಳಲಿದೆ. ಯೋಜನೆಯಡಿ ಹೊಸದಾಗಿ ಟೊಮೆಟೊ ಸಂಸ್ಕರಣಾ ಘಟಕ, ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸುವ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಸಹಾಯಧನ ನೀಡಲಾಗುತ್ತದೆ.

ಶೇ 35 ಸಹಾಯಧನ: ಟೊಮೆಟೊ ಸಂಸ್ಕರಣೆಯಲ್ಲಿ ಕನಿಷ್ಠ 3 ವರ್ಷ ಅನುಭವವಿರುವ ಸ್ವಸಹಾಯ ಸಂಘಗಳು ಮತ್ತು ₹ 1 ಕೋಟಿಗಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ಎಫ್‌ಪಿಒ, ಸಹಕಾರ ಸಂಘಗಳಿಗೆ ಯೋಜನಾ ವೆಚ್ಚದ ಶೇ 35ರಷ್ಟು ಸಹಾಯಧನ ನೀಡಲಾಗುವುದು.

ವೈಯಕ್ತಿಕವಾಗಿ ಟೊಮೆಟೊ ಸಂಸ್ಕರಣಾ ಘಟಕ ಸ್ಥಾಪಿಸುವವರು ಗರಿಷ್ಠ ₹ 10 ಲಕ್ಷದ ಮಿತಿಗೆ ಒಳಪಟ್ಟ ಯೋಜನಾ ವೆಚ್ಚದ ಶೇ 35ರಷ್ಟು ಸಾಲ ಸಂಪರ್ಕಿತ ಬಂಡವಾಳ ಸಹಾಯಧನ ಪಡೆಯಬಹುದು. ಯೋಜನಾ ವೆಚ್ಚದ ಶೇ 10ರಷ್ಟು ಬಂಡವಾಳವನ್ನು ಫಲಾನುಭವಿಗಳೇ ಭರಿಸಬೇಕು.

ಅರ್ಜಿದಾರರು ಕನಿಷ್ಠ 18 ವರ್ಷ ಪೂರೈಸಿರಬೇಕು. 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 10 ಜನರಿಗಿಂತ ಕಡಿಮೆ ಕೆಲಸಗಾರರನ್ನು ಹೊಂದಿರುವ ಕಿರು ಉದ್ದಿಮೆಗಳ ಮಾಲೀಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸಂಸ್ಕರಣಾ ಘಟಕ ಸ್ಥಾಪನೆಗೆ ಆಸಕ್ತಿ ಇರುವವರು 9448999215 ಅಥವಾ 7829512236 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು. ಯೋಜನೆಗೆ ಅರ್ಜಿ ಸಲ್ಲಿಕೆ ಅಥವಾ ನೋಂದಣಿಗೆ www.mofpi.nic.in ವೆಬ್‌ಸೈಟ್‌ ವಿಳಾಸ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT