ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಪ್ರಚಾರಕ್ಕೆ ತೆರೆ: ಮತದಾನಕ್ಕೆ ಕ್ಷಣಗಣನೆ

ಮತದಾರರ ಓಲೈಕೆಗೆ ತೀವ್ರಗೊಂಡ ಕಸರತ್ತು: ಮನೆ ಮನೆ ಪ್ರಚಾರ ಆರಂಭ
Last Updated 16 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಕೋಲಾರ: ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದ್ದು, ಅಭ್ಯರ್ಥಿಗಳು ಪಕ್ಷದ ಕಾರ್ಯಕರ್ತರ ಹಾಗೂ ಬೆಂಬಲಿಗರ ಪಡೆ ಕಟ್ಟಿಕೊಂಡು ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ.

ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಇದ್ದು, ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ಮತದಾರರ ಓಲೈಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ. ಶತಾಯಗತಾಯ ಮತದಾರರ ಮನ ಗೆಲ್ಲುವ ಹಟಕ್ಕೆ ಬಿದ್ದಿರುವ ನಾಯಕರು ತೆರೆಮರೆಯಲ್ಲೇ ಹಣ, ಹೆಂಡದ ಆಮಿಷವೊಡ್ಡಲಾರಂಭಿಸಿದ್ದಾರೆ.

ಜಿಲ್ಲೆಯ ಹಲವೆಡೆ ಕದ್ದುಮುಚ್ಚಿ ಮತದಾರರಿಗೆ ಸೀರೆ, ಬೆಳ್ಳಿ ಆಭರಣ, ಕೈ ಗಡಿಯಾರವನ್ನು ಉಡುಗೊರೆಯಾಗಿ ಕೊಡಲಾಗುತ್ತಿದೆ. ಅಲ್ಲದೇ, ಕೋಳಿ, ಕುರಿ ಮಾಂಸದ ಹಂಚಿಕೆಯು ಎಗ್ಗಿಲ್ಲದೆ ಸಾಗಿದೆ. ದಿನಸಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಟೋಕನ್‌ ಹಂಚಲಾಗುತ್ತಿದೆ.

ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರದ ಕರಪತ್ರ ಹಂಚಿ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ. ಬಡಾವಣೆಗಳಲ್ಲಿ ಕಾರ್ಯಕರ್ತರ ದೊಡ್ಡ ದಂಡೇ ಕಂಡುಬರುತ್ತಿದೆ. ಸಮಯ ಲೆಕ್ಕಿಸದೆ ತಡರಾತ್ರಿವರೆಗೂ ಪ್ರಚಾರ ಮಾಡಲಾರಂಭಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಹಿರಿಯ ರಾಜಕೀಯ ಮುಖಂಡರ ಪೈಕಿ ಕ್ಷೇತ್ರದ ಮತದಾರರಲ್ಲದವರು ಜಿಲ್ಲೆಯಿಂದ ಸಂಜೆ ಹೊರ ಹೋದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಪೊಲೀಸ್‌ ಬಂದೋಬಸ್ತ್‌ ಹೆಚ್ಚಿಸಲಾಗಿದ್ದು, ಪ್ರವಾಸಿ ಮಂದಿರ, ಹೋಟೆಲ್‌, ವಸತಿ ಗೃಹ, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಪೊಲೀಸರು ತಪಾಸಣೆ ಮಾಡಲಾರಂಭಿಸಿದ್ದಾರೆ. ಮಾದರಿ ನೀತಿಸಂಹಿತೆ ತಂಡದ ಹಾಗೂ ಚುನಾವಣಾಧಿಕಾರಿಗಳ ಗಸ್ತು ಹೆಚ್ಚಿಸಲಾಗಿದೆ.

ಹದ್ದಿನ ಕಣ್ಣು: ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾಡಳಿತವು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಹಾಗೂ ಅಂತರರಾಜ್ಯ ಗಡಿಯಲ್ಲಿನ ತನಿಖಾ ಠಾಣೆ (ಚೆಕ್‌ಪೋಸ್ಟ್) ಕಟ್ಟೆಚ್ಚರ ವಹಿಸಲಾಗಿದೆ. ಚೆಕ್‌ಪೋಸ್ಟ್‌ಗಳಿಗೆ ನಿಯೋಜನೆಗೊಂಡಿರುವ ಕಂದಾಯ, ಅಬಕಾರಿ ಮತ್ತು ಪೊಲೀಸ್‌ ಸಿಬ್ಬಂದಿಯು ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ.

ಮುಖ್ಯವಾಗಿ ನಾಲ್ಕು ಚಕ್ರದ ವಾಹನಗಳ ನೋಂದಣಿ ಸಂಖ್ಯೆ, ವಾಹನದಲ್ಲಿ ಪ್ರಯಾಣಿಸುವವರ ವೈಯಕ್ತಿಕ ವಿವರ ಮತ್ತು ಮೊಬೈಲ್‌ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಅಂತರ ರಾಜ್ಯ ನೋಂದಣಿ ಸಂಖ್ಯೆಯುಳ್ಳ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ.

ಸಭೆಗೆ ನಿಷೇಧ: ಬಹಿರಂಗ ಪ್ರಚಾರದ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಮಾವೇಶ, ಮೆರವಣಿಗೆ ನಡೆಸದಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 144ರ ಪ್ರಕಾರ 5 ಜನಕ್ಕಿಂತ ಹೆಚ್ಚು ಮಂದಿ ಗುಂಪು ಗುಂಪಾಗಿ ಮತ ಯಾಚಿಸುವಂತಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 126ಎ ಅನ್ವಯ ಟಿ.ವಿ. ರೇಡಿಯೊ, ಮಾಧ್ಯಮದಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಜಾಹೀರಾತು ನೀಡುವಂತಿಲ್ಲ. ಧ್ವನಿವರ್ಧಕ ಬಳಸಿ ಪ್ರಚಾರ ಮಾಡಬಾರದೆಂದು ಆದೇಶಿಸಿದ್ದಾರೆ.

ರಾಜಕೀಯ ಚರ್ಚೆ, ವಿಶ್ಲೇಷಣೆ, ದೃಶ್ಯ ಅಥವಾ ಆಡಿಯೋ ಮೂಲಕ ಪ್ರಚಾರ ಮಾಡುವಂತಿಲ್ಲ. ಮನೋರಂಜನೆ ಕಾರ್ಯಕ್ರಮಗಳಾದ ನಾಟಕ, ಸಂಗೀತ ಸಂಜೆ ಆಯೋಜಿಸುವಂತಿಲ್ಲ. ಚುನಾವಣಾ ಸಮೀಕ್ಷೆ ಪ್ರಕಟಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT