ಬುಧವಾರ, ಮಾರ್ಚ್ 3, 2021
23 °C
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ: ಧರಣಿನಿರತರ ಆಕ್ರೋಶ

ಸುರಕ್ಷಾ ಕಲ್ಯಾಣ ಮಸೂದೆ ವಿರೋಧಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ಸದಸ್ಯರು ಇಲ್ಲಿ ಶುಕ್ರವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರವು 2016ರಲ್ಲಿ ಜಾರಿ ಮಾಡಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ನೋಟು ಅಮಾನ್ಯೀಕರಣ ಕ್ರಮದಿಂದ ದೇಶದ ಕೋಟ್ಯಂತರ ಕಾರ್ಮಿಕರು ನಿರುದ್ಯೋಗಿಗಳಾದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ಕಾರ್ಮಿಕರು ನಿರುದ್ಯೋಗಿಗಳಾಗಿರುವುದನ್ನು ಆರ್ಥಿಕ ಸಮೀಕ್ಷೆಗಳು ಬಯಲು ಮಾಡಿವೆ. ಇದೀಗ ಕೇಂದ್ರವು ಸಾಮಾಜಿಕ ಸುರಕ್ಷತಾ ಮಸೂದೆ ಜಾರಿಗೊಳಿಸಿ ಕಾರ್ಮಿಕರನ್ನು ಬೀದಿಗೆ ತರಲು ಹೊರಟಿದೆ. ಈ ಮಸೂದೆ ಜಾರಿಯಾದರೆ ಕಟ್ಟಡ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ’ ಎಂದು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಕಿಡಿಕಾರಿದರು.

‘ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳ ಮಾಲೀಕರ ಕೈಗೊಂಬೆಗಳಾಗಿರುವ ಸರ್ಕಾರಗಳಿಗೆ ಕಾರ್ಮಿಕರ ಸಂಕಷ್ಟದ ಅರಿವಿಲ್ಲ. ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿದ್ದ ಕಾನೂನುಗಳನ್ನು ಮಾಲೀಕರ ಅನುಕೂಲಕ್ಕಾಗಿ ಕೇಂದ್ರವು ಮಾರ್ಪಾಡು ಮಾಡಿದೆ. ಸರ್ಕಾರ ಕೇವಲ 4 ಕಾನೂನು ಜಾರಿಗೆ ತಂದಿದೆ. ಈ ಕಾನೂನುಗಳಿಂದ ಕಾರ್ಮಿಕರಿಗೆ ಯಾವುದೇ ಅನುಕೂಲವಿಲ್ಲ’ ಎಂದು ದೂರಿದರು.

ಖಂಡನೀಯ: ‘ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ಸರ್ಕಾರ ಕಾರ್ಮಿಕರ ಕಾನೂನು ತಿದ್ದುಪಡಿ ಮಾಡಿದೆ. ಸರ್ಕಾರವು ಸಾಮಾಜಿಕ ಭದ್ರತೆಗಾಗಿ ವೃತ್ತಿ ಆಧಾರಿತ ಸುರಕ್ಷಾ ಯೋಜನೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತ ಕಟ್ಟಡ ಕಾರ್ಮಿಕರ ಕಾನೂನು ರದ್ದು ಮಾಡಲು ಹೊರಟಿರುವುದು ಖಂಡನೀಯ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಆರು ಲಕ್ಷ ಮಂದಿ ವಿವಿಧ ಕಲ್ಯಾಣ ಸೌಲಭ್ಯಗಳಿಗೆ ಅರ್ಜಿ ಹಾಕಿದ್ದಾರೆ. ಇವರೆಲ್ಲಾ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಹೊಸ ಕಾನೂನು ಜಾರಿಯಾದರೆ ಮದುವೆ, ಪಿಂಚಣಿ, ಹೆರಿಗೆ ಭತ್ಯೆ, ವಿದ್ಯಾರ್ಥಿವೇತನದಂತಹ ಸೌಲಭ್ಯಗಳಿಂದ ವಂಚಿತರಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬದುಕು ರಕ್ಷಿಸಿ: ‘ಸರ್ಕಾರಗಳು ಕಾರ್ಮಿಕರ ಪರವಾಗಿ ನಡೆದುಕೊಳ್ಳಬೇಕು. ಕಾರ್ಮಿಕರ ಪರವಾದ ಕಾನೂನು ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಬೇಕು. ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕಾನೂನು ತಿದ್ದುಪಡಿ ಮಾಡಿರುವುದನ್ನು ರದ್ದುಗೊಳಿಸಬೇಕು. 1996ರ ಕಾಯ್ದೆ ಜಾರಿಯ ಜತೆಗೆ ಕಲ್ಯಾಣ ಮಂಡಳಿ ಸೌಕರ್ಯಗಳನ್ನು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಎಸ್.ಆಶಾ, ಸದಸ್ಯರಾದ ನವೀನ್. ನಾಗರಾಜಪ್ಪ. ನಾಗರಾಜ್, ಸಿಐಟಿಯು ತಾಲ್ಲೂಕು ಘಟಕದ ಕಾರ್ಯದರ್ಶಿ ಎಂ.ವಿಜಯಕೃಷ್ಣ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.