ಖಾಸಗಿ ಕೃಷಿ ಕಾಲೇಜು ಸ್ಥಾಪನೆ ವಿರೋಧಿಸಿ ಧರಣಿ

7

ಖಾಸಗಿ ಕೃಷಿ ಕಾಲೇಜು ಸ್ಥಾಪನೆ ವಿರೋಧಿಸಿ ಧರಣಿ

Published:
Updated:
ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೋಲಾರದಲ್ಲಿ ಶುಕ್ರವಾರ ಧರಣಿ ನಡೆಸಿದರು.

ಕೋಲಾರ: ಕೃಷಿ ವಿಶ್ವವಿದ್ಯಾಲಯದ ಅಡಿ ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು.

‘ಸರ್ಕಾರ ಕೃಷಿ ವಿ.ವಿ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಲು ನಿರ್ಧರಿಸಿದೆ. ಈ ಕ್ರಮ ಸರಿಯಲ್ಲ. ಸರ್ಕಾರದ ನಿರ್ಧಾರವು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾರಕವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರವು 2016ರಲ್ಲಿ ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ಮತ್ತು ಮಾನ್ಯತೆ ನೀಡಲು ನಿರ್ಧರಿಸಿತ್ತು. ಈ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ಕೃಷಿ ವಿ.ವಿ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. ಸರ್ಕಾರ ಹೋರಾಟಕ್ಕೆ ಮಣಿದು ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಇದೀಗ ಪುನಃ ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಲು ಮುಂದಾಗಿದೆ’ ಎಂದು ವಿದ್ಯಾರ್ಥಿ ಕೇಶವ್ ದೂರಿದರು.

‘ಬೆಂಗಳೂರು ಕೃಷಿ ವಿ.ವಿ ಮತ್ತು ಇತರ ವಿ.ವಿಗಳು ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಿವೆ. ಬೆಂಗಳೂರಿನ ರೈ ವಿಶ್ವವಿದ್ಯಾಲಯವು ತನ್ನಲ್ಲಿ ಸ್ನಾತಕ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ (ಐಸಿಎಆರ್) ಮಾನ್ಯತೆ ಪಡೆದ ವಿ.ವಿಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ ಪಡೆಯಲು ಅನುಮತಿ ನೀಡುವ ಬಗ್ಗೆ ನ್ಯಾಯಾಲಯ ಮತ್ತು ಸರ್ಕಾರದ ಮೊರೆ ಹೋಗಿದೆ. ಇದು ಖಂಡನೀಯ’ ಎಂದರು.

ಅನರ್ಹವಾಗಿವೆ: ‘ರೈ ವಿ.ವಿಯು ದೊಡ್ಡಬಳ್ಳಾಪುರದಲ್ಲಿ ಮಾನ್ಯತೆ ಇಲ್ಲದ ಕಾಲೇಜು ಆರಂಭಿಸಿದೆ. ಆ ವಿ.ವಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕೃಷಿ ವಿ.ವಿಗಳ ಮಾನ್ಯತೆ ಪಡೆಯದೆ ನೀಡುತ್ತಿರುವ ಪದವಿಗಳು ಕೃಷಿ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನರ್ಹವಾಗಿವೆ. ಈ ಸಂಬಂಧ ವಿದ್ಯಾರ್ಥಿಗಳು ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಧರಣಿನಿರತರು ಆರೋಪಿಸಿದರು.

‘ಸರ್ಕಾರ ರೈ ವಿ.ವಿಯ ಮನವಿಗೆ ಸಮ್ಮತಿಸಿದರೆ ಐಸಿಎಆರ್ ಮಾನ್ಯತೆಯ ವಿ.ವಿಗಳಲ್ಲಿ ಹೆಚ್ಚಿನ ಅಂಕ ಗಳಿಸಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಆದ ಕಾರಣ ಕೃಷಿ ವಿ.ವಿ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಅನುಮತಿ ನೀಡುವುದನ್ನು ತಡೆಯಬೇಕು. ಕಾನೂನುಬಾಹಿರ ಪದವಿ ನೀಡುತ್ತಿರುವ ರೈ ವಿ.ವಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ರೈ ವಿ.ವಿ ವಿದ್ಯಾರ್ಥಿಗಳಿಗೆ ಕೃಷಿ ವಿ.ವಿಯಲ್ಲಿ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಾದ ಎಚ್.ಎಸ್.ನವ್ಯಶ್ರೀ, ಕೆ.ಜೆ.ಗೌತಮಿ, ದೀಪಿಕಾ, ಪಲ್ಲವಿ, ಎಚ್.ಎಸ್.ಸ್ನೇಹ, ಪವನ್ ಕೆ.ಆರ್.ನವ್ಯಶ್ರೀ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !