ಗ್ರೇಡಿಂಗ್ ಪದ್ಧತಿಗೆ ವಿರೋಧ: ಧರಣಿ

7
ರಕ್ಷಣಾತ್ಮಕ ದರ ನೀಡುವ ಆದೇಶ ಅವೈಜ್ಞಾನಿಕ: ರೈತ ಸಂಘ ಸದಸ್ಯರ ಆರೋಪ

ಗ್ರೇಡಿಂಗ್ ಪದ್ಧತಿಗೆ ವಿರೋಧ: ಧರಣಿ

Published:
Updated:
Deccan Herald

ಕೋಲಾರ: ಗ್ರೇಡಿಂಗ್ ಪದ್ಧತಿ ಮೂಲಕ ರೇಷ್ಮೆಗೂಡಿಗೆ ರಕ್ಷಣಾತ್ಮಕ ದರ ನೀಡುವ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ರೇಷ್ಮೆಗೂಡು ಮಾರುಕಟ್ಟೆ ಎದುರು ಧರಣಿ ನಡೆಸಿದರು.

‘ಗೂಡಿನ ಬೆಲೆ ಕುಸಿತದಿಂದ ಈಗಾಗಲೇ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿ) ಪುನಶ್ಚೇತನಗೊಳಿಸಿದರೆ ದಲ್ಲಾಳಿಗಳನ್ನು ಉದ್ಧಾರ ಮಾಡಲು ಆಗುವುದಿಲ್ಲ ಎಂಬ ಕಾರಣದಿಂದ ಸರ್ಕಾರ ಗ್ರೇಡಿಂಗ್ ಆಧಾರದ ಮೇಲೆ ರಕ್ಷಣಾತ್ಮಕ ದರ ನೀಡುವ ಆದೇಶ ಹೊರಡಿಸಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ರೇಷ್ಮೆಗೂಡಿನ ಬೆಲೆ ಕುಸಿದಿದ್ದು, ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಖರೀದಿಸುವವರು ಇಲ್ಲದೆ ರೈತರಿಗೆ ದಿಕ್ಕು ತೋಚದಂತಾಗಿದೆ. ಕೆಎಸ್‌ಎಂಬಿ ನಿಷ್ಕ್ರಿಯವಾಗಿರುವುದು ಇದಕ್ಕೆಲ್ಲಾ ಕಾರಣ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಬರ ಪರಿಸ್ಥಿತಿ ನಡುವೆಯೂ ರೈತರು ಬಡ್ಡಿ ಸಾಲ ಮಾಡಿ ರೇಷ್ಮೆ ಬೆಳೆದಿದ್ದಾರೆ. ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗಿ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಗೂಡಿನ ಬೆಲೆ ಏರಿಕೆಗೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ದಲ್ಲಾಳಿಗಳ ಪರ ನಿಂತಿದೆ. ಬೆಂಬಲ ಬೆಲೆ ಘೋಷಣೆ ಮಾಡಲು ಅವಕಾಶವಿದ್ದರೂ ಆ ಪ್ರಯತ್ನ ಮಾಡುತ್ತಿಲ್ಲ’ ಎಂದು ಹೇಳಿದರು.

ಚೆಲ್ಲಾಟವಾಡುತ್ತಿದೆ: ‘ಸರ್ಕಾರ ಮಿಶ್ರ ತಳಿ ಕೆ.ಜಿ ಗೂಡಿಗೆ ₹ 80 ಮತ್ತು ದ್ವಿತಳಿ ಕೆ.ಜಿಗೆ ₹ 100 ಪ್ರೋತ್ಸಾಹಧನ ನೀಡುವ ಭರವಸೆ ಕೊಟ್ಟು ಈಗ ಅವೈಜ್ಞಾನಿಕ ಗ್ರೇಡಿಂಗ್ ಪದ್ಧತಿ ಜಾರಿ ಮಾಡಿ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಸರ್ಕಾರಕ್ಕೆ ರೇಷ್ಮೆ ಬೆಳೆಗಾರರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಕಿಡಿಕಾರಿದರು.

‘ಕೆ.ಜಿ ಗೂಡಿಗೆ ₹ 350 ಬೆಲೆ ನಿಗದಿಪಡಿಸಿದರೆ ವ್ಯಾಪಾರಿಗಳು ಮತ್ತು ರೈತರಿಗೆ ನಷ್ಟವಾಗುವುದಿಲ್ಲ. ಕೇಂದ್ರ ಸರ್ಕಾರ ಚೀನಾ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ 43ಕ್ಕೆ ಹೆಚ್ಚಿಸಬೇಕು. ರೇಷ್ಮೆ ಬೆಳೆಗಾರರ ಸಮಸ್ಯೆ ಬಗೆಹರಿಸಲು ಬಸವರಾಜ್ ವರದಿ ಜಾರಿಗೊಳಿಸಬೇಕು. ಕೆಎಸ್‌ಎಂಬಿ ಮೂಲಕ ನೂಲು ಖರೀದಿಸಿ ಕೆ.ಜಿ ಗೂಡಿಗೆ ₹ 350 ಸ್ಥಿರ ಬೆಲೆ ಇರುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ, ಸದಸ್ಯರಾದ ರಾಜೇಶ್, ರಮೇಶ್, ವೆಂಕಟೇಶ್, ಪುರುಷೋತ್ತಮ್, ಚಂದ್ರಪ್ಪ, ಕೃಷ್ಣೇಗೌಡ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !