ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವೇ ಗಟ್ಟಿ: ಸಂಸದ ಮುನಿಸ್ವಾಮಿ ಲೇವಡಿ

ಖಂಡಿತ ಅಧಿಕಾರಕ್ಕೆ ಬರಲ್ಲ: ಸಂಸದ ಮುನಿಸ್ವಾಮಿ ಲೇವಡಿ
Last Updated 21 ಮೇ 2022, 13:40 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರ ಪ್ರತ್ಯೇಕ ಬಣಗಳಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಖಂಡಿತ ಅಧಿಕಾರಕ್ಕೆ ಬರಲ್ಲ. ಅವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಲೇವಡಿ ಮಾಡಿದರು.

ಇಲ್ಲಿ ಶನಿವಾರ ನಡೆದ ಬಿಜೆಪಿಯ ಜಿಲ್ಲಾ ಮಟ್ಟದ ಕಾರ್ಯಕಾರಿಣಿಯಲ್ಲಿ ಮಾತನಾಡಿ, ‘ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಬಿಜೆಪಿಗೆ ಭದ್ರ ನೆಲೆಯಿದೆ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ವಿಪಕ್ಷ ಸ್ಥಾನವೇ ಗಟ್ಟಿ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸಿದರೆ ಸಾಕು ಮತ ಹಾಕುತ್ತಾರೆ. ಕಾರ್ಯಕರ್ತರು ಪ್ರಾಮಾಣಿಕವಾಗಿ ಈ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ದೇಶದಲ್ಲಿ ದಲಿತರು ಅಂಬೇಡ್ಕರ್‌ರನ್ನು ಗೌರವಿಸುವುದಾದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಓಟು ಹಾಕಬಾರದು. ಕಾಂಗ್ರೆಸ್‌ವರು ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿ ಅಗೌರವ ತೋರಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರತಿ ಹಳ್ಳಿಯಲ್ಲೂ ಓಡಾಡಿ ಅಂಬೇಡ್ಕರ್‌ಗೆ ಕಾಂಗ್ರೆಸ್ ಮಾಡಿದ ಅವಮಾನದ ಬಗ್ಗೆ ಪ್ರಚಾರ ಮಾಡಬೇಕು’ ಎಂದು ತಿಳಿಸಿದರು.

‘ಪಕ್ಷದ ಕಾರ್ಯಕ್ರಮಗಳಲ್ಲಿ ತಮ್ಮ ಫೋಟೋ ಹಾಕಿಲ್ಲ, ಹೆಸರು ಹಾಕಿಲ್ಲ, ಕಾರ್ಯಕ್ರಮಕ್ಕೆ ಕರೆದಿಲ್ಲ ಎಂಬುದನ್ನು ಬಿಟ್ಟು ಒಂದು ಮನೆಯವರಂತೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪರಸ್ಪರ ಭಿನ್ನಾಭಿಪ್ರಾಯ ಮರೆತು ತಾಯಿಯಂತಿರುವ ಪಕ್ಷ ಕಟ್ಟುವ ಕೆಲಸ ಮಾಡೋಣ. ಪಕ್ಷದ ಹಿತದೃಷ್ಟಿ, ಸಂಘಟನೆಯ ಉದ್ದೇಶದಿಂದ ಗೊತ್ತಿದ್ದೊ ಅಥವಾ ಗೊತ್ತಿಲ್ಲದೋ ಕಾರ್ಯಕ್ರಮ ಮಾಡಿರಬಹುದು. ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡೋಣ’ ಎಂದರು.

ತನಿಖೆಗೆ ಒತ್ತಾಯಿಸುತ್ತೇವೆ: ‘ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು ಕಾಂಗ್ರೆಸ್‌ನವರು ಗಲಭೆ ಗದ್ದಲ ಮಾಡಲು ಹೊರಟಿದ್ದಾರೆ. 2013ರಲ್ಲಿ ಸೂಪರ್ ಗೃಹ ಸಚಿವ ಕೆಂಪಯ್ಯ ನೇತೃತ್ವದಲ್ಲಿ ಪಿಎಸ್‌ಐ ಹಗರಣದಲ್ಲಿ ಭಾಗಿಯಾಗಿದ್ದವರು ಲೋಕಾಯುಕ್ತ ಸಂಸ್ಥೆ ಮುಚ್ಚಿ ಎಸಿಬಿ ಆರಂಭಿಸಿದ್ದರ ಹಿಂದಿನ ಉದ್ದೇಶವೆನೆಂದು ಹೇಳಲಿ. 2013ರಿಂದ ಈವರೆಗೆ ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇವೆ’ ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿದರು.

‘ಸದಾನಂದಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಎತ್ತಿನಹೊಳೆ ಯೋಜನೆ ಆರಂಭಕ್ಕೆ ಅನುಮೋದನೆ ನೀಡಲಾಯಿತು. ನಂತರ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಯೋಜನೆಗೆ ಹಣ ಬಿಡುಗಡೆ ಮಾಡಲಾಯಿತು. ಆದರೆ, ಕಾಂಗ್ರೆಸ್‌ ಮುಖಂಡರು ಎತ್ತಿನಹೊಳೆ ಜಾರಿಗೊಳಿಸಿರುವುದು ತಾವು ಎಂದು ಹೇಳಿಕೊಂಡು ಊರೂರು ಅಲೆಯುತ್ತಿದ್ದಾರೆ’ ಎಂದು ಟೀಕಿಸಿದರು.

‘ಎತ್ತಿನಹೊಳೆ ಯೋಜನೆಯಿಂದ ಕೋಲಾರ ಜಿಲ್ಲೆಯ ಪ್ರಭಾವಿಗಳಿಗೆ ಕಮಿಷನ್ ಹೋಗಿದೆ ಎಂದು ಜೆಡಿಎಸ್‌ನ ಕುಮಾರಸ್ವಾಮಿ ಸದನದಲ್ಲೇ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ದಿನನಿತ್ಯ ನೀತಿಪಾಠ ಹೇಳುವವರು ಕಾಂಗ್ರೆಸ್‌ನಲ್ಲಿ ಜಾಸ್ತಿಯಾಗಿದ್ದಾರೆ. ಅವರು ಹೆಚ್ಚು ದಿನ ಉಳಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.

ದೊಡ್ಡ ಯುದ್ಧ: ‘ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೊಡ್ಡ ಯುದ್ಧ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಿಂದ ಲೋಕಸಭೆವರೆಗೆ ನಡೆಯುವ ಪ್ರತಿ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯ 6 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಶತಸಿದ್ಧ’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಮಂಜುನಾಥ್‌ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ. ಡಾ.ವೇಣುಗೋಪಾಲ್, ರಾಜ್ಯ ಘಟಕದ ಕಾರ್ಯದರ್ಶಿ ಕೇಶವ ಪ್ರಸಾದ್, ಪಕ್ಷದ ಜಿಲ್ಲಾ ಉಸ್ತುವಾರಿ ಕಾಂತರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT