ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬೆಮಲ್‌ ಖಾಸಗೀಕರಣಕ್ಕೆ ವಿರೋಧಿಸಿ ಪ್ರತಿಭಟನೆ

ಕೆಜಿಎಫ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಿವೃತ್ತ ನೌಕರರ ಬೈಕ್‌ ರ್‌್್ಯಾಲಿ
Last Updated 12 ಮಾರ್ಚ್ 2021, 14:36 IST
ಅಕ್ಷರ ಗಾತ್ರ

ಕೋಲಾರ: ಬೆಮಲ್ ಸಂಸ್ಥೆಯ ಖಾಸಗೀಕರಣ ವಿರೋಧಿಸಿ ಬೆಮಲ್‌ ನಿವೃತ್ತ ನೌಕರರ ಸಂಘದ ಸದಸ್ಯರು ಕೆಜಿಎಫ್‌ನಿಂದ ಜಿಲ್ಲಾ ಕೇಂದ್ರದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಬೈಕ್‌ ರ್‌್್ಯಾಲಿ ನಡೆಸಿ ಪ್ರತಿಭಟನೆ ಮಾಡಿದರು.

‘ಬೆಮಲ್ ಖಾಸಗೀಕರಣಗೊಳಿಸದಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಕೇಂದ್ರವು ಮನವಿಗೆ ಸ್ಪಂದಿಸದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಬೆಮಲ್‌ ಖಾಸಗೀಕರಣಗೊಳಿಸುವ ಕೇಂದ್ರದ ನಿರ್ಧಾರ ಖಂಡನೀಯ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದೆಲ್ಲೆಡೆ ದೊಡ್ಡ ಜಾಲ ಹೊಂದಿರುವ ಹಾಗೂ ಉತ್ಕೃಷ್ಟ ಸೇವೆ ನೀಡುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆ ಬೆಮಲ್‌ ಸಂಸ್ಥೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸಲು ಹೊರಟಿದೆ. ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಕೇಂದ್ರವು ಬೆಮಲ್‌ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ’ ಎಂದು ಸಂಘದ ಸದಸ್ಯ ಜಿ.ಅರ್ಜುನನ್ ಕಿಡಿಕಾರಿದರು.

‘ಬೆಮಲ್‌ 1964ರಲ್ಲಿ ಮಾತೃ ಸಂಸ್ಥೆ ಎಚ್‌ಎಎಲ್‌ನಿಂದ ಪ್ರತ್ಯೇಕಗೊಂಡು ರೈಲು ಕೋಚ್‌ ಉತ್ಪಾದನೆ ಹಾಗೂ ಬಿಡಿ ಭಾಗಗಳ ಪೂರೈಕೆಗಾಗಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು. ನಂತರ ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್‌ನಲ್ಲಿ ಉತ್ಪಾದನಾ ಘಟಕ ವಿಸ್ತರಿಸಿ ರಕ್ಷಣೆ, ರೈಲು, ಮೆಟ್ರೊ, ಗಣಿಗಾರಿಕೆ, ಮೂಲಸೌಕರ್ಯ ಹಾಗೂ ಏರೋಸ್ಪೇಸ್ ವಲಯಕ್ಕೆ ಅಗತ್ಯ ಯಂತ್ರೋಪಕರಣ, ವಾಹನಗಳನ್ನು ಪೂರೈಸುತ್ತಿದೆ’ ಎಂದರು.

‘ಕೇಂದ್ರವು ಜಿಲ್ಲೆ, ರಾಜ್ಯ ಹಾಗೂ ದೇಶದ ಸ್ವಾಭಿಮಾನದ ಸಂಕೇತವಾಗಿರುವ ₹ 1 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಬೆಮಲ್‌ ಸಂಸ್ಥೆಯನ್ನು ₹ 1 ಸಾವಿರ ಕೋಟಿಗೆ ಮಾರಾಟ ಮಾಡಿ ಖಾಸಗಿ ಕಂಪನಿಗಳ ಕೈಗೆ ಒಪ್ಪಿಸಲು ಮುಂದಾಗಿದೆ. ಜ.4ರಂದು ಬಿಡ್‌ ನಡೆದಾಗ ಬೆಮಲ್‌ ಖರೀದಿಗೆ ಯಾರೂ ಮುಂದೆ ಬಾರದ ಕಾರಣ ಅವಧಿ ವಿಸ್ತರಿಸಲಾಗಿತ್ತು’ ಎಂದು ಹೇಳಿದರು.

ಚಿನ್ನದ ಮೊಟ್ಟೆ ಕೋಳಿ: ‘ಕೇಂದ್ರದ ಅವೈಜ್ಞಾನಿಕ ನೀತಿಯ ಕಾರಣ ಬೆಮಲ್‌ 2013ರಲ್ಲಿ ನಷ್ಟ ಅನುಭವಿಸಿದ್ದನ್ನು ಹೊರತುಪಡಿಸಿದರೆ ಕಳೆದ 52 ವರ್ಷದಲ್ಲಿ ಲಾಭದಾಯಕವಾಗಿ ಮುನ್ನಡೆದಿದೆ. ಕೇಂದ್ರದ ಬೊಕ್ಕಸಕ್ಕೆ ಡಿವಿಡೆಂಟ್ ಸೇರಿದಂತೆ ವರ್ಷಕ್ಕೆ ₹ 750 ಕೋಟಿ ಪಾವತಿಸುತ್ತಿದೆ. ಕೇಂದ್ರದ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಬೆಮಲ್ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ 2016ರಿಂದಲೂ ನಡೆಯುತ್ತಿದೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರವು ಬೆಮಲ್ ಸಂಸ್ಥೆಯಲ್ಲಿ ಶೇ 54.03ರಷ್ಟು ಷೇರು ಬಂಡವಾಳ ಹೊಂದಿದ್ದು, 2016ರ ನವೆಂಬರ್‌ನಲ್ಲಿ ಸಚಿವ ಸಂಪುಟದ ಅನುಮೋದನೆ ಮೇರೆಗೆ ಶೇ 26ರಷ್ಟು ಷೇರನ್ನು ಖಾಸಗಿಯವರಿಗೆ ಮಾರುವ ಪ್ರಕ್ರಿಯೆ ಆರಂಭಿಸಿದೆ. ಇದರ ಮುಂದುವರಿದ ಭಾಗವಾಗಿ ಸಂಸ್ಥೆಯ ಆಡಳಿತ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

ಭದ್ರತೆಗೆ ಧಕ್ಕೆ: ‘ಆರಂಭದಿಂದಲೂ ಲಾಭದಾಯಕವಾಗಿ ನಡೆಯುತ್ತಿರುವ ಬೆಮಲ್‌ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ತೆರಿಗೆ ಹಾಗೂ ಲಾಭಾಂಶದ ರೂಪದಲ್ಲಿ ಸಾವಿರಾರು ಕೋಟಿ ನೀಡುತ್ತಿದೆ. ಜತೆಗೆ ಷೇರುದಾರರಿಗೆ ಪ್ರತಿ ವರ್ಷ ಡಿವಿಡೆಂಟ್ ಪಾವತಿಸುತ್ತಾ ದೇಶದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಇಂತಹ ಸಂಸ್ಥೆಯನ್ನು ಖಾಸಗೀಕರಣಗೊಳಿಸಿದರೆ ದೇಶದ ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೆಮಲ್‌ ನಿವೃತ್ತ ನೌಕರರಾದ ಅಶೋಕ್ ಲೋನಿ, ವಿ.ಮುನಿರತ್ನಂ, ಆರ್.ಶ್ರೀನಿವಾಸ್, ಅ.ಕೃ.ಸೋಮಶೇಖರ್, ಆರ್‌.ರಾಜಶೇಖರನ್, ಜಯಶೀಲನ್, ಎನ್‌.ಎನ್‌.ಶ್ರೀರಾಮ್, ಟಿ.ಎಂ.ವೆಂಕಟೇಶ್, ವಿಜಯಕುಮಾರಿ, ಆಶಾ, ನಾರಾಯಣರೆಡ್ಡಿ, ಭೀಮರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT