ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಕೃಷಿ ಕಾನೂನು ಜಾರಿಗೆ ವಿರೋಧ

ಕೆಪಿಆರ್‌ಎಸ್‌ ಕಾರ್ಯಕರ್ತರಿಂದ ಧರಣಿ
Last Updated 27 ಫೆಬ್ರುವರಿ 2020, 15:44 IST
ಅಕ್ಷರ ಗಾತ್ರ

ಕೋಲಾರ: ಮಾದರಿ ಕೃಷಿ ಕಾನೂನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ಸದಸ್ಯರು ಕೋಲಾರ ತಾಲ್ಲೂಕು ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮಾತನಾಡಿ, ‘ದೇಶದಲ್ಲಿ ಶೇ.85ರಷ್ಟು ರೈತರು ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ಕೃಷಿ ಭೂಮಿಯನ್ನು ಗುತ್ತಿಗೆಗೆ ಕಲ್ಪಿಸುವ ಮೂಲಕ ರೈತರನ್ನು ಬೀದಿಪಾಲು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ದೂರಿದರು.

‘ಬಗರ್ ಹುಕುಂ ಸಾಗುವಳಿದಾರರ ಭೂ ಮಂಜೂರಾತಿಗಾಗಿ ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ರೈತರಿಗೆ, ಕೃಷಿ ಕೂಲಿಕಾರರಿಗೆ ಬಡವರಿಗೆ ಬೀಳು, ಸರ್ಕಾರಿ, ಹೆಚ್ಚುವರಿ ಭೂಮಿಯನ್ನು ಹಂಚಿಕೆ ಮಾಡುವ ಬದಲು ಕಂಪನಿಗಳು ಕೃಷಿ ಭೂಮಿ ಹೊಂದುವಂತೆ ಮಾಡುವ ಸಲುವಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸರ್ಕಾರ ಹೊರಟಿದೆ’ ಎಂದು ಆರೋಪಿಸಿದರು.

‘ಕೃಷಿ ಕ್ಷೇತ್ರವನ್ನು ನಾಶ ಮಾಡಿ ಕಾಪೋರೇಟ್ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಾದರಿ ಕೃಷಿ ಗುತ್ತಿಗೆ ಕಾನೂನು ೨೦೧೬ ಅಂಗೀಕರಿಸಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಜಾರಿಗೆ ತರಲು ಒತ್ತಡ ಹೇರುತ್ತಿದೆ. ಈ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ದಾವೋಸ್‌ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಒಪ್ಪಿಕೊಂಡಿರುವುದು ರೈತ ಸಮುದಾಯಕ್ಕೆ ಎಸಗಿದ ದ್ರೋಹ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತರು ಬೇಸಾಯವು ತಲ ತಲಾಂತರದಿಂದ ಕಾಪಾಡಿಕೊಂಡು ಬಂದಿದ್ದಾರೆ. ಕೃಷಿ ಪದ್ಧತಿಯನ್ನು ಹಾಳು ಮಾಡಿ ಕ್ರಿಮಿನಾಶಕ, ಕೀಟನಾಶಕಗಳನ್ನು ಬಳಸಿ ಮಣ್ಣಿನ ಫಲವತ್ತತೆ ನಾಶ ಮಾಡಲು ಕಂಪನಿಗಳಿಗೆ ಗುತ್ತಿಗೆ ನೀಡುವ ಉದ್ದೇಶವಾಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

ರೈತ ಸಂಘ ಹಾಗೂ ಹಸಿರು ಸೇನಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಮಾತನಾಡಿ, ‘ಬರ ಪರಿಸ್ಥಿತಿಯನ್ನು ನಿವಾರಣೆ ಮಾಡಲು ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿ ಎಂದು ಒತ್ತಾಯಿಸುತ್ತಿದ್ದರೆ, ಸರ್ಕಾರ ಭೂಮಿಯನ್ನೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ’ ಎಂದರು.

‘ಕಂಪನಿ ಕೃಷಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಭಾಗದ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಬಿಜೆಪಿ ಸರ್ಕಾರ ನಡೆಸುತ್ತಿದೆ. ರೈತ ದ್ರೋಹದ ಕಾಯ್ದೆಯನ್ನು ವಾಪಸ್ ಪಡೆಯದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ದೇವರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ಕಾರ್ಯದಶಿರ್ಧ ವಿ.ನಾರಾಯಣರೆಡ್ಡಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಗಾಂಧಿನಗರ ನಾರಾಯಣಸ್ವಾಮಿ, ಗಂಗಮ್ಮ, ವೆಂಕಟೇಶ್, ರಾಮೇಗೌಡ, ಎಂ.ರಮೇಶ್, ಚಂದ್ರಪ್ಪ, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT