ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಲ್ಲಿ ಕ್ವಾರಂಟೈನ್‌ಗೆ ವಿರೋಧ: ರಸ್ತೆ ಬಂದ್‌

ಮುಂಬೈ– ದೆಹಲಿಯ 18 ಮಂದಿ ಸ್ಥಳಾಂತರ ವದಂತಿ: ಗ್ರಾಮಸ್ಥರ ಧರಣಿ
Last Updated 3 ಏಪ್ರಿಲ್ 2020, 12:18 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಶಂಕೆಯಲ್ಲಿ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುವ 18 ಮಂದಿಯನ್ನು ನಗರದ ಹೊರವಲಯದ ಗಾಜಲದಿನ್ನೆಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸ್ಥಳೀಯರು ಗ್ರಾಮದ ಸಂಪರ್ಕ ರಸ್ತೆಗಳನ್ನು ಶುಕ್ರವಾರ ಬಂದ್‌ ಮಾಡಿ ಧರಣಿ ನಡೆಸಿದರು.

ದೆಹಲಿ ಹಾಗೂ ಮಹಾರಾಷ್ಟ್ರದಿಂದ ಧರ್ಮ ಪ್ರಚಾರಕ್ಕಾಗಿ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗೊಲ್ಲಹಳ್ಳಿ ಮತ್ತು ಭೀಮಗಾನಹಳ್ಳಿ ಮಸೀದಿಗೆ ಬಂದಿದ್ದ 18 ಮಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಅವರೆಲ್ಲರನ್ನೂ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲಿ (ಕ್ವಾರಂಟೈನ್) ಇರಿಸಿದ್ದಾರೆ.

ಈ 18 ಮಂದಿಯನ್ನು ನಗರದ ಇಟಿಸಿಎಂ ಆಸ್ಪತ್ರೆ ಮುಂಭಾಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ಸಿದ್ಧತೆ ನಡೆಸಿದ್ದರು. ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 18 ಮಂದಿಯನ್ನೂ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಈ ನಡುವೆ 18 ಮಂದಿಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಥವಾ ಚಿಕ್ಕಹಸಾಳ ಗ್ರಾಮದಲ್ಲಿನ ಜವಾಹರ್‌ ನವೋದಯ ವಿದ್ಯಾಲಯಕ್ಕೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಶುಕ್ರವಾರ ವದಂತಿ ಹಬ್ಬಿತು.

ಇದರಿಂದ ಆತಂಕಗೊಂಡ ಗಾಜಲದಿನ್ನೆ, ಚಿಕ್ಕಹಸಾಳ, ದೊಡ್ಡಹಸಾಳ, ಈಕಂಬಳ್ಳಿ, ಬೆಮಲ್‌ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳು ಮತ್ತು ಬಡಾವಣೆ ನಿವಾಸಿಗಳು ಸಂಪರ್ಕ ರಸ್ತೆಗಳಲ್ಲಿ ಜೆಸಿಬಿಯಿಂದ ದೊಡ್ಡ ಹಳ್ಳ ತೋಡಿದರು. ಅಲ್ಲದೇ, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಅಡ್ಡಲಾಗಿ ಮಣ್ಣು ಸುರಿದು ಮತ್ತು ಮುಳ್ಳಿನ ಗಿಡಗಳನ್ನು ಹಾಕಿ ಧರಣಿ ನಡೆಸಿದರು.

ಸೋಂಕಿನ ಶಂಕೆ: ‘ಮುಂಬೈ ಮತ್ತು ದೆಹಲಿಯಿಂದ ಬಂದಿರುವ ಆ 18 ಮಂದಿ ನಿಜಾಮುದ್ದೀನ್‌ ಪ್ರದೇಶದಲ್ಲಿನ ತಬ್ಲೀಗ್‌ ಜಮಾತ್‌ ಕೇಂದ್ರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿರುವ ಶಂಕೆಯಿದೆ. ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆಯಿದ್ದು, ಅವರನ್ನು ಯಾವುದೇ ಕಾರಣಕ್ಕೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಥವಾ ಜವಾಹರ್‌ ನವೋದಯ ವಿದ್ಯಾಲಯಕ್ಕೆ ಕರೆತರಬಾರದು’ ಎಂದು ಧರಣಿನಿರತರು ಆಗ್ರಹಿಸಿದರು.

‘ದೇಶದೆಲ್ಲೆಡೆ ಕೊರೊನಾ ಸೋಂಕಿನ ಭೀತಿ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಆ 18 ಮಂದಿಯನ್ನು ಗ್ರಾಮದ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಹೊರಟಿರುವುದು ಸರಿಯಲ್ಲ. ಅಧಿಕಾರಿಗಳು ಸ್ಥಳೀಯರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಗ್ರಾಮಸ್ಥರಿಗೆ ಕೊರೊನಾ ಸೋಂಕು ತಗುಲಿದರೆ ಯಾರು ಹೊಣೆ’ ಎಂದು ಕಿಡಿಕಾರಿದರು.

ಗ್ರಾಮಸ್ಥರ ಕಾವಲು: ‘18 ಮಂದಿಯನ್ನು ಜಾಲಪ್ಪ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲೇ (ಕ್ವಾರಂಟೈನ್‌) ಇರಿಸಬೇಕು. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆ 18 ಮಂದಿಯನ್ನು ಗ್ರಾಮದ ಶಾಲೆಗಳಿಗೆ ಕರೆತಂದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು 18 ಮಂದಿಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಥವಾ ಜವಾಹರ್‌ ನವೋದಯ ವಿದ್ಯಾಲಯಕ್ಕೆ ಖಂಡಿತ ಸ್ಥಳಾಂತರ ಮಾಡುತ್ತಾರೆಂದು ಆತಂಕಗೊಂಡಿರುವ ಗ್ರಾಮಸ್ಥರು ಗ್ರಾಮದ ಸಂಪರ್ಕ ರಸ್ತೆಗಳಲ್ಲೇ ಕಾವಲು ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT